ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಸುಭಾಷಚಂದ್ರ ನಾಟಿಕರ್ ಅವರ ನಿವಾಸ ಹಾಗೂ ವಿಭಾಗದ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಕವಿವಿ ಯ ಮೌಲ್ಯಮಾಪನ ಕುಲಸಚಿವ ಸ್ಥಾನಕ್ಕೆ ಪ್ರೋ.ನಾಟೀಕರ್ ಅವರ ಹೆಸರು ಇತ್ತೀಚಿಗೆ ಕೇಳಿ ಬಂದಿತ್ತು.
ಧಾರವಾಡ ಶೆಟ್ಟರ್ ಕಾಲೊನಿಯಲ್ಲಿ ಮನೆ ಹೊಂದಿರುವ ನಾಟಿಕರ್ ಅವರು, ಕೊಪ್ಪಳದ ತಾಳಿಕೋಟೆಯಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಎರಡೂ ಕಡೆಗಳಲ್ಲೂ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಕವಿವಿ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕರ್ ಅಧ್ಯಯನ ವಿಭಾಗದ ಮೇಲೂ ಲೋಕಾಯುಕ್ತ ಎಸ್.ಪಿ.ಸಿದ್ದಲಿಂಗಪ್ಪ ಅವರ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದ್ದು, ಪರಿಶೀಲನಾ ಕಾರ್ಯ ಮುಂದುವರಿದಿದೆ.


