ಬೆಂಗಳೂರು :
‘ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಬಿಜೆಪಿ ಶಾಸಕ ಯತ್ನಾಳ್ ವಿಷಕನ್ಯೆ ಎಂದು ಕರೆಯುವ ಮೂಲಕ ಬಿಜೆಪಿ ಇಡೀ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕ್ಷಮೆ ಕೇಳಬೇಕು. ಅಲ್ಲದೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು ಈ ವಿಚಾರವಾಗಿ ಹೇಳಿದ್ದಿಷ್ಟು;
‘ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಯುಪಿಎ1 ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ನೀಡಿದರು. ಆದರೆ ಸೋನಿಯಾ ಗಾಂಧಿ ಅವರು ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ನೀಡಿದರು. ಸೋನಿಯಾ ಗಾಂಧಿ ಅವರು ಈನೆಲದಲ್ಲಿ ಹುಟ್ಟದಿದ್ದರೂ ಇಂದಿರಾ ಗಾಂಧಿ ಅವರ ಸೊಸೆಯಾಗಿ ರಾಜೀವ್ ಗಾಂಧಿ ಅವರ ಧರ್ಮಪತ್ನಿಯಾಗಿ ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. ಎರಡು ಬಾರಿ ಅಂದರೆ 10 ವರ್ಷಗಳ ಕಾಲ ಅವರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು. ನಮ್ಮೆಲ್ಲರ ಒತ್ತಡದ ಮೇರೆಗೆ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ಪಕ್ಷದ ಅಧ್ಯಕ್ಷರಾದರು. ಆಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ನನ್ನಂತಹ ಕಾರ್ಯಕರ್ತನನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಕಳುಹಿಸಿದಾಗ ಅಲ್ಲಿಗೆ ಭೇಟಿ ನೀಡಿ ಎಲ್ಲಾ ಕಾರ್ಯಕರ್ತರಿಗೆ ಶಕ್ತಿ ತುಂಬಿದ ಆ ತಾಯಿಯನ್ನು ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ. ಮಿಸ್ಟರ್ ಯತ್ನಾಳ್ ನಿನ್ನ ನಾಲಿಗೆ ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಈ ರಾಜ್ಯದ ಸಂಸ್ಕೃತಿ ಇರುವ ಜನ ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆದಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುವುದಿಲ್ಲ.
ನಾವು ಯತ್ನಾಳ್ ಕ್ಷಮಾಪಣೆ ಕೇಳುತ್ತಿಲ್ಲ. ಈ ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆ ಕೋರಬೇಕು. ಇದು ಕೇವಲ ಸೋನಿಯಾ ಗಾಂಧಿ ಅವರಿಗೆ ಮಾಡಿರುವ ಅಪಮಾನ ಮಾತ್ರವಲ್ಲ. ದೇಶಕ್ಕಾಗಿ ತನ್ನ ಸರ್ವಸ್ವ ತ್ಯಾಗ ಮಾಡಿರುವ ಮಹಿಳೆಯರಿಗೆ ಆಗಿರುವ ಅಪಮಾನ. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ.
ಭಾರತೀಯ ಸಂಸ್ಕೃತಿ ಮಹಿಳೆಯರನ್ನು ಪೂಜಿಸುವ ಸಂಸ್ಕೃತಿ. ನಾವು ನಮ್ಮ ದೇಶವನ್ನು ಭಾರತ ಮಾತೆ ಎಂದು ಕರೆಯುತ್ತೇವೆ. ಆಮೂಲಕ ದೇಶ, ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ.
ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಯವರ ಚಾಳಿ. ಅವರಿಗೆ ನೆಹರೂ ಕುಟುಂಬವನ್ನು ಟೀಕಿಸುವ ಚಾಳಿ. ಮೋದಿ ಅವರು ಸೋನಿಯಾ ಗಾಂಧಿ ಅವರನ್ನು ಜೆರ್ಸಿ ಹಸು ಎಂದು ಕರೆದಿದ್ದರು. ಇದು ನಿಮ್ಮ ಧರ್ಮ, ಸಂಸ್ಕೃತಿನಾ ಪ್ರಧಾನಮಂತ್ರಿಗಳೇ? ರಾಹುಲ್ ಗಾಂಧಿ ಅವರನ್ನು ಹೈಬ್ರೀಡ್ ಕರು ಎಂದು ಕರೆದರು. ಆದರೆ ರಾಹುಲ್ ಗಾಂಧಿ ಎಲ್ಲ ಅಧಿಕಾರ ತ್ಯಾಗ ಮಾಡಿ ಜನರ ಕಷ್ಟ ಸುಖಃ ಅರಿತು ಎಲ್ಲರನ್ನೂ ಒಂದುಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ವಿಧವೆ ಎಂದು ಕರೆದಿದ್ದೀರಿ, ನಮ್ಮ ತಾಯಿ, ನಿಮ್ಮ ತಾಯಿ ವಿಧವೆಯರಲ್ಲವೇ? ಇದು ಪ್ರಕೃತಿ ನಿಯಮ ಇದು. ನಮ್ಮ ಪಕ್ಷದ ಗುರುತನ್ನು ರಕ್ತದ ಕೈ ಎಂದು ಕರೆದರು. ಈ ಹಸ್ತದ ಶಕ್ತಿ ಏನು ಎಂಬುದನ್ನು ಮೇ 13ರಂದು ತಿಳಿಯಲಿದೆ.
ದೇಶದಲ್ಲಿ ಬದಲಾವಣೆ ಕರ್ನಾಟಕದಿಂದ ಆರಂಭವಾಗಲಿದೆ. ಈ ರಾಜ್ಯ ಇಂದಿರಾ ಗಾಂಧಿ ಅವರಿಗೆ ಮರುಜನ್ಮ ಕೊಟ್ಟಿದೆ, ಸೋನಿಯಾ ಗಾಂಧಿ ಅವರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೇಳುವ ಮುನ್ನ ಬಿಜೆಪಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಕ್ಷಮೆ ಕೇಳಿ ಆತನನ್ನು ಪಕ್ಷದಿಂದ ಹೊರಹಾಕಬೇಕು.
*ಪ್ರಧಾನಿ ಕಾರ್ಯಕ್ರಮಕ್ಕೆ ಯಾರಿಂದ ಅನುಮತಿ ಪಡೆಯಲಾಗಿತ್ತು?*
ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾರಕ ಎಂದು ಹೇಳಿದ್ದಾರೆ. ಅವರ ಟೀಕೆ ನಂತರ ರಾಹುಲ್ ಗಾಂಧಿ ಅವರು ಸಾರ್ವಜನಿಕ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ತೀರ್ಮಾನಿಸಿ ಐದನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಪ್ರಧಾನಮಂತ್ರಿಗಳು ವರ್ಚುವಲ್ ಸಭೆ ಮಾಡಿ 50 ಲಕ್ಷ ಜನರ ಜತೆ ಸಭೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಹಾಗೂ ಬೊಮ್ಮಾಯಿ ಅವರು ಈ ಸಭೆ ಮಾಡಲು ಚುನಾವಣಾ ಆಯೋಗದಿಂದ ಅಮತಿ ಪಡೆದಿತ್ತೇ? ಚುನಾವಣಾ ಆಯೋಗದ ನೀತಿ ಸಂಹಿತೆ ಏನು ಹೇಳುತ್ತದೆ? ಬಿಜೆಪಿ ನೀಡಿರುವ ಜಾಹೀರಾತು ಯಾರ ಆಧಾರದ ಮೇಲೆ ನೀಡಲಾಗಿದೆ? ಈ ವಿಚಾರವಾಗಿ ನಾವು ಚುನಾವಣಾ ಆಯೋಗಕ್ಕೆ ವಿಚಾರಿಸಿದಾಗ, ಅವರು ಯಾರಿಗೂ ಈ ಸಭೆ ಬಗ್ಗೆ ಅನುಮತಿ ನೀಡಿಲ್ಲ. ಹೀಗಾಗಿ ಯಾರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಜಾಹೀರಾತು ಹಾಗೂ ಸಭೆಯ ವೆಚ್ಚವನ್ನು ಯಾರ ಖಾತೆ ಹಣದಿಂದ ನಡೆಸಲಾಗಿದೆ?
*ಪ್ರಶ್ನೋತ್ತರ:*
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಈ ಹೇಳಿಕೆ ಬಂದಿದೆ ಎಂದು ಕೇಳಿದಾಗ, ‘ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಏನು ಹೇಳಬೋಕೋ ಹೇಳಿದ್ದಾರೆ. ಅವರು ರಾಜ್ಯ ಚುನಾವಣಾ ಪ್ರಚಾರದಲ್ಲಿ ತಾರಾ ಪ್ರಚಾರಕರಾಗಿದ್ದಾರೆ. ಅವರು ಸ್ಪಷ್ಟನೆ ನೀಡಿದ್ದಾರೆ. ನೀವು ಈ ಬಗ್ಗೆ ಅವರ ಬಳಿ ಕೇಳಿದರೆ ಉತ್ತಮ. ನಮ್ಮ ನಾಯಕಿಗೆ ಮಾಡಿರುವ ಅಪಮಾನಕ್ಕೆ ಬಿಜೆಪಿ ನಾಯಕರು ಕ್ಷಣೆ ಕೋರಿ ಆತನನ್ನು ವಜಾ ಮಾಡಬೇಕು’ ಎಂದು ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುರಿತು ಯತ್ನಾಳ್ ಅವರು ಅಶ್ಲೀಲ ಪದ ಬಳಕೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಏನೇ ಮಾತನಾಡಿದರೂ ಅವುಗಳನ್ನು ನಮ್ಮ ಗ್ಯಾರಂಟಿ ಯೋಜನೆಗಳೇ ಸುಡಲಿದೆ’ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಇದು ಆ ಎರಡು ಪಕ್ಷಗಳ ನಡುವಣ ವಿಚಾರ. ಪಕ್ಷದ ನಾಯಕರೇ ಈ ವಿಚಾರ ಹೇಳಿರುವಾಗ ಅದನ್ನು ನಾವು ತಿರಸ್ಕರಿಸಲು ಆಗುವುದಿಲ್ಲ. ಅವರಿಗೆ ಒಳ್ಳೆಯದಾಗಲಿ’ ಎಂದರು.
ಖರ್ಗೆ ಅವರು ಹಾಗೂ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಬೈದಷ್ಟು ಬಿಜೆಪಿಗೆ ಹೆಚ್ಚು ಮತಗಳು ಬರುತ್ತವೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಇದಕ್ಕೆ 13ರಂದು ಉತ್ತರ ಸಿಗಲಿದೆ’ ಎಂದರು.
ಮೋದಿ ಅವರ ಸಭೆ ಜಾಹೀರಾತು ವಿಚಾರವಾಗಿ ನೀವು ದೂರು ದಾಖಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಖಂಡಿತವಾಗಿಯೂ ನಾವು ದೂರು ದಾಖಲಿಸುತ್ತೇವೆ.’
ಶಿವರಾಜಕುಮಾರ್ ಅವರು ಕೇವಲ ಸೊರಬದಲ್ಲಿ ಮಾತ್ರ ಪ್ರಚಾರ ಮಾಡುತ್ತಾರೋ ಬೇರೆ ಕಡೆಗಳಲ್ಲೂ ಪ್ರಚಾರ ಮಾಡುತ್ತಾರೋ ಎಂದು ಕೇಳಿದಾಗ, ‘ಶಿವರಾಜಕುಮಾರ್ ಅವರು ತಮ್ಮ ಧರ್ಮಪತ್ನಿಯನ್ನು ಕಾಂಗ್ರೆಸ್ ಕಚೇರಿಗೆ ಕಳುಹಿಸಿಕೊಟ್ಟಿದ್ದು, ಅವರು ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ. ಇಬ್ಬರ ದೇಹ ಬೇರೆಯಾದರೂ ಇಬ್ಬರ ಮನಸ್ಸು ಒಂದೇ’ ಎಂದು ತಿಳಿಸಿದರು.
ಯತ್ನಾಳ್ ಅವರ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಹೇಚ್ಚಾಗಿ ಮಾತನಾಡುತ್ತಿಲ್ಲ ಎಂದು ಕೇಳಿದಾಗ, ‘ಯತ್ನಾಳ್ ಒಬ್ಬ ಕೆಟ್ಟ ಮನುಷ್ಯ. ಪಕ್ಷದ ಅಧ್ಯಕ್ಷನಾಗಿ ನಾನು ನನ್ನ ಹೇಳಿಕೆ ನೀಡಿದ್ದೇನೆ. ಆತ ಯಡಿಯೂರಪ್ಪ ಅವರ ಬಗ್ಗೆಯೂ ಮಾತನಾಡಿದ್ದಾನೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ 2500 ಕೋಟಿ ಮಂತ್ರಿ ಸ್ಥಾನಕ್ಕೆ 100 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಆದರೂ ಬಿಜೆಪಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಆತ ಈ ಮಟ್ಟಕ್ಕೆ ಇಳಿದಿದ್ದಾನೆ’ ಎಂದು ತಿಳಿಸಿದರು.
ಈ ಚುನಾವಣೆಯ ವಿಷಯ ಬದಲಿಸುವ ಹುನ್ನಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ‘ಈ ಚುನಾವಣೆಯಲ್ಲಿ ವಿಷಯ ಬದಲಿಸಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಪ್ರಮುಖ ವಿಚಾರಗಳು’ ಎಂದು ತಿಳಿಸಿದರು.
ಸುದೀಪ್ ಹಾಗೂ ದರ್ಶನ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಸುದೀಪ್ ಹಾಗೂ ದರ್ಶನ್ ಅವರು ಪಕ್ಷ ಸೇರಿಲ್ಲ. ಅವರು ಸಿನಿಮಾ ನಟರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ದರ್ಶನ್ ಯಲಹಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಸುದೀಪ್ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡಬಹುದು. ಅವರು ನಮಗೆ ಉತ್ತಮ ಸ್ನೇಹಿತರು. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ಆದರೆ ಇಲ್ಲಿ ಗೀತಾ ಶಿವಕುಮಾರ್ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ತಿಳಿಸಿದರು.
ಸುದೀಪ್ ಅವರನ್ನು ನೀವು ಭೇಟಿ ಮಾಡಿ ಮಾತನಾಡಿದ ಬಗ್ಗೆ ಕೇಳಿದಾಗ, ‘ಸುದೀಪ್ ಹಾಗೂ ನನ್ನ ನಡುವಣ ಸಂಭಾಷಣೆ, ಮಾತುಕತೆ, ನಮ್ಮ ಬಾಂಧವ್ಯ ನಮಗೆ ಮಾತ್ರ ಗೊತ್ತಿದೆ. ಎಲ್ಲವನ್ನು ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
*ಗೀತಾ ಶಿವರಾಜಕುಮಾರ್ ಅರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತುಗಳು*
ಈ ವಿಶೇಷ ಕಾರ್ಯಕ್ರಮಕ್ಕೆ ಮಂಗಳೂರಿನಿಂದ ಬಂದಿದ್ದೇನೆ. ನಾನು ಅನೇಕ ದಿನಗಳಿಂದ ಗಾಳ ಹಾಕುತ್ತಿದ್ದೆ. ಮಧುಬಂಗಾರಪ್ಪ ಅವರು ಗಾಳಕ್ಕೆ ಸಿಕ್ಕರು. ನಂತರ ಸಹೋದರಿ ಗೀತಾ ಶಿವರಾಜಕುಮಾರ್ ಅವರಿಗೆ ಬಲೆಯನ್ನೇ ಬೀಸಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಅವರು ರಾಹುಲ್ ಗಾಂಧಿ ಅವರು ರಾಜ್ಯದ ಜನರಿಗೆ ಘೋಷಣೆ ಮಾಡಿರುವ ಜನಪರ ಕಾರ್ಯಕ್ರಮಗಳ ಬಲೆಗೆ ಬಿದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಟೀಕೆ ಮಾಡಿದ್ದರು. ಅವರ ಟೀಕೆಗೆ ರಾಜಕುಮಾರ್ ಅವರ ಸೊಸೆ, ನಮ್ಮ ಶಿವಣ್ಣನ ಧರ್ಮಪತ್ನಿ, ನನ್ನ ನಾಯಕರಾದ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಉತ್ತರ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಗೀತಾ ಅವರನ್ನು ಪಕ್ಷಕ್ಕೆ ನೀನೇ ಹೋಗಿ ಸೇರಿಸಿಕೊಳ್ಳಬೇಕು ಎಂದು ಹೇಳಿದರು. ಹೀಗಾಗಿ ಮಂಗಳೂರಿನಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದೇನೆ. ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಬಹಳ ಸಂತೋಷದಿಂದ ಗೀತಾ ಶಿವರಾಜಕುಮಾರ್ ಅವರನ್ನು ಪಕ್ಷಕ್ಕೆ ತುಂಬುಹೃದಯದಿಂದ ಸ್ವಾಗತಿಸುತ್ತಿದ್ದೇನೆ.
ಇನ್ನು ಮೂಡಿಗೆರೆ ಕ್ಷೇತ್ರದಲ್ಲಿ ಬಹಳ ವಿಚಲಿತ ರಾಜಕಾರಣ ನಡೆಯುತ್ತಿದೆ. ಬಿ.ಬಿ ನಿಂಗಯ್ಯ ಅವರು ಜೆಡಿಎಶ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಬೇಕು ಎಂದು 6 ತಿಂಗಳ ಕಾಲ ಕಾದರು. ನಾನು ಒಪ್ಪಲಿಲ್ಲ. ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ಜೆಡಿಎಸ್ ನಲ್ಲಿ ಮೂರು ಬಾರಿ ಶಾಸಕರು ಹಾಗೂ ಮಾಜಿ ಮಂತ್ರಿಯಾಗಿದ್ದ ಸಜ್ಜನ, ಹಸನ್ಮುಖಿ ನಾಯಕ
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾಂಗ್ರೆಸ್ ಪಕ್ಷ ಮಾತ್ರ ರಕ್ಷಣೆ ನೀಡಲು ಸಾಧ್ಯ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರು ಕೂತ ಜಾಗದಲ್ಲಿ ಅಧ್ಯಕ್ಷರನ್ನಾಗಿ ಮಾಡಿದ್ದು, ಈ ಪಕ್ಷ ಸೇರಬೇಕು ಎಂದು
ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಶಮ್ಶುಲ್ಲಾ ಖಾನ್ ಹಾಗೂ ಶಾಂತಿನಗರ ಕ್ಷೇತ್ರದ ಭುವನೇಶ್ವರಿ ತುಳಸಿರಾಮ, ದೊಮ್ಮಲೂರಿನ ಮಾಜಿ ಕಾರ್ಪೊರೇಟರ್ ಗೀತಾ ಶ್ರೀನಿವಾಸ ರೆಡ್ಡಿ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ಎಲ್ಲಾ ನಾಯಕರ ಜತೆ ಸಾವಿರಾರು ಜನ ಕಾರ್ಯಕರ್ತರು ಇಂದು ಪಕ್ಷ ಸೇರುತ್ತಿದ್ದಾರೆ. ಇವರೆಲ್ಲರಿಗೂ ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ.
*ಗೀತಾ ಶಿವರಾಜಕುಮಾರ್ ಅವರ ಮಾತುಗಳು:*
ಕಾಂಗ್ರೆಸ್ ಐತಿಹಾಸಿಕ ಪಕ್ಷ. ಈ ಪಕ್ಷಕ್ಕೆ ಸೇರುತ್ತಿರುವುದು ಬಹಳ ಸಂತೋಷವಾಗುತ್ತಿದೆ. ನನ್ನನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಸಹೋದರ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾವು ಕನಕಪುರಕ್ಕೆ ಶಿಫ್ಟ್ ಆಗುತ್ತಿದ್ದೇವೆ ಎಂದು ಮಾಧ್ಯಮಗಳು ತಿಳಿಸುತ್ತಿದ್ದು, ಅದೂ ಕೂಡ ಸಧ್ಯದಲ್ಲೇ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಜತೆ ಕೆಲಸ ಮಾಡಿದ್ದು, ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ತಮ್ಮ ಮಧು ಕಾಂಗ್ರೆಸ್ ಸೇರಿದಾಗಲೇ ನಾನು ಕಾಂಗ್ರೆಸ್ ಜತೆಗಿದ್ದೆ. ಶಿವರಾಜಕುಮಾರ್ ಅವರು ಕೂಡ ಕಾಂಗ್ರೆಸ್ ಪಕ್ಷದ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅವರು ಚಿತ್ರೀಕರಣದಲ್ಲಿರುವುದರಿಂದ ಸಮಯ ಬಿಡುವು ಮಾಡಿಕೊಂಡು ಪ್ರಚಾರ ಮಾಡುತ್ತಾರೆ. ಪಕ್ಷ ನನಗೆ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೂ ಧನ್ಯವಾದ ತಿಳಿಸುತ್ತೇನೆ.