ಬೆಳಗಾವಿ :
ಬೆಳಗಾವಿಯ ಹನುಮಾನನಗರದಲ್ಲಿ ಕೆಲಸಕ್ಕೆ ತೆರಳಿದ್ದ ಖಾನಾಪುರ ತಾಲೂಕಿನ ಪ್ಲಂಬರ್ ಒಬ್ಬರು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಮಹೇಶ ಪರಶುರಾಮ ಪಾಟೀಲ (ವಯಸ್ಸು 21, ವಡೇಬೈಲ್) ಎಂದು ಗುರುತಿಸಲಾಗಿದೆ.
ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಂಗಳವಾರ ಅಂತ್ಯಕ್ರಿಯೆ ವಡೇಬೈಲ್ ನಲ್ಲಿ ನಡೆಯಲಿದೆ.
ಬೆಳಗಾವಿಯ ಹನುಮಾನನಗರದಲ್ಲಿ ಮುಖ್ಯ ಗುತ್ತಿಗೆದಾರ ಅಭಿಜಿತ ಫಕೀರಯ್ಯ ಶಿವಯೋಗಿಮಠ ಅವರ ಅಡಿಯಲ್ಲಿ ಲಕ್ಷ್ಮಣ ಮಂಜಳಕರ ಉಪ ಗುತ್ತಿಗೆದಾರರಾಗಿದ್ದಾರೆ. ಅನಗೋಳದಿಂದ ಮಹೇಶ ಪರಶುರಾಮ ಪಾಟೀಲ ಪ್ರತಿ ದಿನ ಬೆಳಗಾವಿ ಹನುಮಾನಗರದಲ್ಲಿ ಪ್ಲಂಬರ್ ಕೆಲಸಕ್ಕೆ ಹೋಗುತ್ತಿದ್ದರು. ಮಧ್ಯಾಹ್ನ ಹೊತ್ತು ಕೆಲಸ ಮಾಡುವಾಗ ಕೈಯಲ್ಲಿ ಗ್ರೈಂಡರ್ ಯಂತ್ರದಿಂದ ವಿದ್ಯುತ್ ತಂತಿ ತುಂಡಾಗಿ ಅವರಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗುತ್ತಿಗೆದಾರ ಲಕ್ಷ್ಮಣ ಮಂಜಳಕರ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಡೇಬೈಲ್ನ ಪರಶುರಾಮ ಪಾಂಡುರಂಗ ಪಾಟೀಲ ಅವರ ಏಕೈಕ ಪುತ್ರ ಮಹೇಶ್ ಆಗಿದ್ದು, ಕೆಲ ಕಾಲ ಪುಣೆಯಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು.
ಅಲ್ಲಿಂದ ಕೆಲಸ ಬಿಟ್ಟು ತವರಿಗೆ ಬಂದು ನಂದಿಹಳ್ಳಿಯಲ್ಲಿರುವ ತನ್ನ ಮಾವನ ಮನೆಯಿಂದ ಬೆಳಗಾವಿಗೆ ಬರುತ್ತಿದ್ದರು. ಸೋಮವಾರವು ಎಂದಿನಂತೆ ಬೆಳಗಾವಿಯಲ್ಲಿ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಅಜ್ಜ, ತಾಯಿ, ತಂದೆ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.