ಶಿವಮೊಗ್ಗ : ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ಪುತ್ರನ ಹತ್ಯೆಗೆ ಸಂಚು ಎಸಗಿರುವುದು ಪತ್ತೆಯಾಗಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ.
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದ. ಭದ್ರಾವತಿ ಗಾಂಧಿ ಸರ್ಕಲ್ ಬಳಿ ಬಸವರಾಜ್ ಅವರನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಮುಬಾರಕ್ ಕಳುಹಿಸಿದ್ದ. ಸುಫಾರಿ ಪಡೆದಿದ್ದ ಟಿಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಗುತ್ತಿಗೆದಾರ ಸುನಿಲ್ ಎಂಬವರು ದೂರು ನೀಡಿದ್ದಾರೆ. ಟಿಪ್ಪುವನ್ನು ಗುತ್ತಿಗೆದಾರ ಸುನಿಲ್ ಭೇಟಿಯಾದಾಗ ಆತನಿಗೆ ಕೂಡ ಡಿಚ್ಚಿ ಮುಬಾರಕ್ ಕರೆ ಮಾಡಿದ್ದಾನೆ. ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿದ್ದಾನೆ. ಭದ್ರಾವತಿ ಹಳೆನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.