ಜನ ಜೀವಾಳ ವಿಶೇಷ ಬೆಳಗಾವಿ :ಬೆಳಗಾವಿಯಲ್ಲೇ ಇರುವ ಸಾರಿಗೆ ಸಚಿವರು ಇತ್ತ ಗಮನಿಸುತ್ತೀರಾ ?
ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಪ್ರಾಥಮಿಕ ಶಿಕ್ಷಣ ಎನ್ನುವುದು ಅಮೂಲ್ಯ ನೆನಪುಗಳ ಆಗರ. ಆದರೆ, ಬೆಳಗಾವಿಯ ಸಾರಿಗೆ ಸಂಸ್ಥೆ ಇದೀಗ ಶಾಲಾ ಮಕ್ಕಳ ಪುಟ್ಟ ಕನಸುಗಳನ್ನು ಚಿವುಟಿ ಹಾಕುವ ಪ್ರಯತ್ನ ನಡೆಸುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯ. ಪ್ರತಿ ವರ್ಷ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಾರೆ. ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅಲ್ಲಿಯ ಅನುಭವವನ್ನು ಪಡೆಯುತ್ತಾರೆ.
ಶೈಕ್ಷಣಿಕ ಪ್ರವಾಸಕ್ಕೆ ಅಗತ್ಯವಾಗಿ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಆವಲಂಬಿಸಬೇಕು. ಸರಕಾರವು ಸಹ ಸರಕಾರಿ ಸಾರಿಗೆ ಬಸ್ಸುಗಳನ್ನೇ ಶೈಕ್ಷಣಿಕ ಪ್ರವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಕಟ್ಟಪ್ಪಣೆ ಹೊರಡಿಸಿದೆ.
ಹೀಗಾಗಿ ಸಂಬಂಧಿಸಿದ ಶಾಲೆಗಳ ಶಿಕ್ಷಕರು ಸಾರಿಗೆ ಸಂಸ್ಥೆಯನ್ನು ಸಂಪರ್ಕಿಸಿದಾಗ ಅಧಿಕಾರಿಗಳು ನೀಡುವ ಉತ್ತರ ಮಾತ್ರ ತೀವ್ರ ನಿರಾಶೆಗೆ ಕಾರಣವಾಗಿದೆ.
ಶೈಕ್ಷಣಿಕ ಸಂಸ್ಥೆಗಳು ಶಾಲಾ ಪ್ರವಾಸಕ್ಕೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ನೀಡುವ ಬೇಡಿಕೆ
ಮುಂದಿಟ್ಟರೆ ಅಧಿಕಾರಿಗಳು ಮಾತ್ರ ಅದನ್ನು ನಯವಾಗಿ ತಳ್ಳಿ ಹಾಕುತ್ತಿರುವುದು ಅತ್ಯಂತ ನೋವಿನ ಸಂಗತಿ.
ಬಸ್ ಇಲ್ವಂತೆ !
ಬೆಳಗಾವಿಯ 3 ಡಿಪೋ ಗಳಲ್ಲಿ ಬಸ್ಸೇ ಇಲ್ಲ ಎಂದು ವ್ಯವಸ್ಥಾಪಕರು ಕಡ್ಡಿ ಮುರಿದಂತೆ ಶಾಲೆಯ ಶಿಕ್ಷಕರಿಗೆ ಹೇಳುತ್ತಿರುವುದು ಅತ್ಯಂತ ಶೋಚನೀಯ ಸಂಗತಿ.
ಬೆಳಗಾವಿ ಸಾರಿಗೆ ಸಂಸ್ಥೆಯ ಈ ಅಧಿಕಾರಿಗಳಿಗೆ ಅಧಿವೇಶನಕ್ಕಾಗಿ ಈಗ ಇಲ್ಲಿಯೇ ಇರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕರೆದು ಬುದ್ಧಿ ಹೇಳುವರೋ ಕಾದುನೋಡಬೇಕಿದೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದೆ. ಸರ್ಕಾರದ ಈ ನಿರ್ಧಾರ ಶ್ಲಾಘನೀಯ. ಇದು ಒಂದೆಡೆಯಾದರೆ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಬಸ್ ಇಲ್ಲವೆನ್ನುವ ಸರಕಾರದ ಭಾಗವೇ ಆಗಿರುವ ಸಾರಿಗೆ ಸಂಸ್ಥೆಯ ಬೇಜವಾಬ್ದಾರಿಗೆ ಸಚಿವರು ಮದ್ದು ಅರೆಯುವರೇ ?
ಸರಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತದೆ. ಆದರೆ, ಸರಕಾರದ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ನಾನಾ ಸಬೂಬು ಸರಕಾರಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗುತ್ತಿದೆ.
ಆದರೆ ದೊಡ್ಡವರು ಹಾಗೂ ಪ್ರತಿಷ್ಠಿತರು ಸೂಚನೆ ನೀಡಿದರೆ ಯಾವುದೇ ಸದ್ದು ಗದ್ದಲ ಇಲ್ಲದೆ ವ್ಯವಸ್ಥಾಪಕರು ಬಸ್ಸುಗಳನ್ನು ನೀಡುತ್ತಾರಂತೆ ! ಇದು ಅಲ್ಲಿನ ಸಿಬ್ಬಂದಿಗಳು ಹೇಳುವ ಮಾತು.