ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ಶ್ಯಾಮ್ ವಿಜಯ ಸಿಂಹ
ಬೆಳಗಾವಿ :
ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಬೆಳಗಾವಿಯ ಇಂಡಸ್ ಅಲ್ಟಮ್ ಇಂಟರ್ ನ್ಯಾಷನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಕರ್ನಲ್ ಬಿ. ಶ್ಯಾಮ್ ವಿಜಯ ಸಿಂಹ ಎಸ್.ಎಮ್. ತಿಳಿಸಿದರು.
ಬೆಳಗಾವಿಯಲ್ಲಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಸಸ್ಯಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಧೈರ್ಯ ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸತ್ಯ ಹೇಳಲು ಎಂದಿಗೂ ಹಿಂಜರಿಯಬಾರದು. ಸದಾ ಮುನ್ನುಗ್ಗುವ ಛಲ ಬೆಳೆಸಿಕೊಳ್ಳಬೇಕು. ನಮ್ಮ ದೇಶದ ಯುವ ಪೀಳಿಗೆಗೆ 1999ರಲ್ಲಿ ನಡೆದ ನಿರ್ಣಾಯಕ ಕಾರ್ಗಿಲ್ ಯುದ್ಧ ಸ್ಪೂರ್ತಿ ಒದಗಿಸುತ್ತದೆ. ಅಂದು ನಮ್ಮ ದೇಶದ ಯೋಧರು ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟಿಸಿ ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ದೇಶದ ಯೋಧರ ಧೈರ್ಯ-ಸಾಹಸ ದೇಶದ ಜನತೆಗೆ ಸದಾ ಪ್ರೇರಕವಾಗಿದೆ. ವಿದ್ಯಾರ್ಥಿಗಳು ನಮ್ಮ ಸೈನಿಕರಲ್ಲಿರುವ ಅಪ್ರತಿಮ ನಾಯಕತ್ವ ಗುಣಗಳು, ದೇಶಪ್ರೇಮ ಹಾಗೂ ಶಿಸ್ತನ್ನು ಬಾಲ್ಯದಲ್ಲೇ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಬಿ. ಜಯಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ವಾವರೆ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಸವಿತಾ ಪಟ್ಟಣ ಶೆಟ್ಟಿ ಸ್ವಾಗತ ಮತ್ತು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಸಂಜೀವ ಕೋಶಾವರ ವಂದಿಸಿದರು. ಎಲ್ ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಖಿಮಜಿ ನಿರೂಪಿಸಿದರು.