ಗುವಾಹಟಿ: ಅಸ್ಸಾಂನ ಕೇಂದ್ರ ಭಾಗದಲ್ಲಿ 5 ತೀವ್ರತೆಯ
ಭೂಕಂಪ ಸಂಭವಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಯಾರಿಗೂ ಯಾವುದೇ ಗಾಯ ಅಥವಾ ಯಾವುದೇ ಆಸ್ತಿ ಹಾನಿಯಾದ ಬಗ್ಗೆ ತಕ್ಷಣದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಹ್ಮಪುತ್ರದ ದಕ್ಷಿಣ ದಂಡೆಯ ಮೋರಿಗಾಂವ್ ಜಿಲ್ಲೆಯ 16 ಕಿ.ಮೀ ಆಳದಲ್ಲಿ ತಡರಾತ್ರಿ 2.25ಕ್ಕೆ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಹೇಳಿದೆ.
ದಾಂಗ್, ತಮುಲ್ಪುರ್, ಸೋನಿತ್ಪುರ್, ಕಮ್ರಪ್, ಬಿಸ್ವನಾಥ್, ಉದಲ್ಗುರಿ, ನಲ್ಬರಿ, ಬಜಾಲಿ, ಬರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಜಾರ್, ಬೊಂಗೈಗಾಂವ್ ಮತ್ತು ಬ್ರಹ್ಮಪುತ್ರದ ಉತ್ತರ ದಂಡೆಯಲ್ಲಿರುವ ಲಖಿಂಪುರದಲ್ಲೂ ಕಂಪನದ ಅನುಭವವಾಗಿದೆ.
ಮಧ್ಯ-ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು, ಸಂಪೂರ್ಣ ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಭೂಮಿ ನಡುಗಿದೆ.
ಮಧ್ಯ-ಪೂರ್ವ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲೂ ಭೂಕಂಪ ಆಗಿದೆ ಎಂದು ವರದಿ ತಿಳಿಸಿದೆ.
ಕಂಪನದಿಂದಾಗಿ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಈಶಾನ್ಯ ಭಾರತವು ಭೂಕಂಪನ ವಲಯದಲ್ಲಿ ಬರುತ್ತದೆ. ಇದರಿಂದಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ.