ಉಡುಪಿ : ಹೆಬ್ರಿ ತಾಲೂಕಿನ ಕೆಲವೆಡೆ ರವಿವಾರ ಮೇಘ ಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆಯಿಂದ ಜನ ನಲುಗಿದ ಘಟನೆ ನಡೆದಿದೆ. ಮಧ್ಯಾಹ್ನ 3:30 ರಿಂದ ಸಂಜೆ 4:00 ವರೆಗೆ ದಿಢೀರ್ ಮಳೆ ಸುರಿದಿದೆ.ಬಲ್ಲಾಡಿ,ಕಂತಾರ್ ಬೈಲು ಗ್ರಾಮದ ಜನ ಮಳೆಯಿಂದ ತತ್ತರಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಕಾರು, 15 ಕ್ಕೂ ಹೆಚ್ಚು ದನಕರುಗಳು, ಅಡಿಕೆ ಮರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಏಕಾಏಕಿ ಮೇಘ ಸ್ಪೋಟದಿಂದ ಪ್ರವಾಹ ಸಂಭವಿಸಿದ್ದು ಸ್ಥಳೀಯರು ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಯಿತು.
ಬಲ್ಲಾಡಿಯ ಈಶ್ವರ ನಗರ ಬಳಿಯ ಬಮ್ಮಗುಂಡಿ ಹೊಳೆ ಮೇಘ ಸ್ಫೋಟದಿಂದ ಉಕ್ಕಿ ಹರಿದಿದೆ. ಇದರ ಪರಿಣಾಮ ಜಲ ಪ್ರವಾಹ ನೇರವಾಗಿ ಮನೆಗಳಿಗೆ ನುಗ್ಗಿದೆ. ಭಾರಿ ನೆರೆಯಿಂದ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಕೇರಳ ಮೂಲದ ವ್ಯಕ್ತಿಗೆ ಸೇರಿರುವ ರಬ್ಬರ್ ತೋಟಕ್ಕೂ ನೀರು ನುಗ್ಗಿದೆ. ಮನೆಯವರು ಮತ್ತು ಗ್ರಾಮಸ್ಥರು ಕೊಚ್ಚಿಕೊಂಡು ಹೋಗುತ್ತಿರುವ ವಾಹನಗಳ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಹ ಯಾವ ರೀತಿಯಲ್ಲಿ ಇದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಕಬ್ಬಿನಾಲೆ ಭಾಗದ ಪರ್ವತ ಶ್ರೇಣಿಯಲ್ಲಿ ಈ ಮೇಘ ಸ್ಫೋಟವಾಗಿ ಪ್ರವಾಹ ಸೃಷ್ಟಿಯಾಗಿದ್ದು ತಮ್ಮ ಜೀವಮಾನದಲ್ಲೇ ಇಂಥ ಭೀಕರ ಪ್ರವಾಹ ನೋಡಿಲ್ಲವೆಂದು ನಾಗರಿಕರು ಪ್ರತಿಕ್ರಿಯೆ ನೀಡಿದ್ದಾರೆ.