ಬೆಳಗಾವಿ: ಸರಕಾರದ ಕೆಲಸ ದೇವರ ಕೆಲಸ ಎಂಬ ಮಾತು ಎಲ್ಲ ಇಲಾಖೆಗಳಲ್ಲೂ ಎದ್ದು ಕಾಣುತ್ತಿದೆ. ಅದರಲ್ಲೂ ಇಲಾಖೆಗಳು ಜನಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ಆಗಾಗ ಜನಪರ ಕಾಳಜಿವುಳ್ಳ ಸಚಿವರು ಇಲಾಖೆಗಳ ಅಧಿಕಾರಿಗಳಿಗೆ ಬೋಧನೆ ಹಾಗೂ ಉಪದೇಶ ಮಾಡುವುದುಂಟು. ಆದರೆ, ಗೃಹ ಮಂಡಳಿ ಇದೀಗ ನಾಗರಿಕರಿಂದ ದೂರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ರಾಜ್ಯ ಗೃಹ ಮಂಡಳಿ ವಿವಿಧ ಜಿಲ್ಲೆಗಳ ಗೃಹ ಮಂಡಳಿಗಳ ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಅವುಗಳಿಗೆ ತಕ್ಕಂತೆ ನಾಗರಿಕರು ಬೆಳಗಾವಿಯ ಗೃಹ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದ ನಾಗರಿಕರಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಜೊತೆಗೆ ಗೃಹ ಮಂಡಳಿ ತಾನು ನಿರ್ಮಿಸಿದ ಬಡಾವಣೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ, ಕಸದ ವಿಲೇವಾರಿಯಂತೂ ದೂರದ ಮಾತು. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಗೃಹ ಮಂಡಳಿಯಿಂದ ನಾಗರಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಜಿಲ್ಲಾಧಿಕಾರಿಗಳೇ, ನಿಮ್ಮ ಆಧೀನದಲ್ಲಿ ಬರುವ ಬೆಳಗಾವಿ ಮಹಾಂತೇಶನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹ ಮಂಡಳಿ ಅಧಿಕಾರಿ ಸಿಬ್ಬಂದಿಗೆ ನೀವೇ ತಿಳಿ ಹೇಳಿ. ಇಲ್ಲವಾದರೆ ಗೃಹ ಮಂಡಳಿಯ ಆಯುಕ್ತರಿಗೆ ಕರೆ ಮಾಡುವುದಂತು ನಿಶ್ಚಿತ ಎನ್ನುತ್ತಿದ್ದಾರೆ ಬೆಳಗಾವಿ ನಾಗರಿಕರು.