ಬೆಳಗಾವಿ : ದೇಶಭಕ್ತಿ ಕೇವಲ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರದೇ ಅದು ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲೂ ಇರಬೇಕು ಎಂದು ಅಖಿಲ ಭಾರತೀಯ ರಾಷ್ಟ್ರೀಯ ಸೇವಕಿ ಸಮಿತಿ ಕಾರ್ಯವಾಹಕಿ ಅಲಕಾತಾಯಿ ಇನಾಂದಾರ ಅಭಿಪ್ರಾಯಪಟ್ಟರು.
ನಗರದ ಕಾಕತಿವೇಸ್ ನಲ್ಲಿರುವ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತೀಯರ ಹೃದಯ ಕಮಲದಲ್ಲಿ ಭಾರತ ಮಾತೆಗೆ ವಿಶೇಷವಾದ ಸ್ಥಾನವಿರಲಿ. ದೇಶಾಭಿಮಾನ ಕೇವಲ ಆಗಸ್ಟ್ ಮತ್ತು ಜನವರಿ ತಿಂಗಳಿಗೆ ಮಾತ್ರ ಸೀಮಿತವಾಗಿರದೇ ಪ್ರತಿ ದಿನವೂ ಇರಬೇಕು. ಭಾರತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುವುದನ್ನು ಸಹಿಸಲಾಗದೆ ಕೆಲವು ಬಾಹ್ಯ ಶಕ್ತಿಗಳು ಭಾರತದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ತಮ್ಮ ಆಣತಿಯಂತೆ ನಡೆಯಬೇಕೆಂದು ನಿರ್ದೇಶಿಸುತ್ತಾರೆ. ಅದಕ್ಕೆ ಪ್ರತಿಯೊಬ್ಬ ಭಾರತೀಯತೆನು ಅದರ ವಿರುದ್ಧ ನಿಲ್ಲಬೇಕು. ನಾವು ವ್ಯವಹಾರ ಮಾಡುವಾಗ, ನಮ್ಮಲ್ಲಿ ರಾಷ್ಟ್ರೀಯತೆಯ ಪ್ರಜ್ಞೆ ಜಾಗ್ರತೆಯಾಗಿರಬೇಕು. ನಾವು ಬಳಸುವ ವಸ್ತುಗಳು ಸ್ವದೇಶಿ ಉತ್ಪನ್ನಗಳಾಗಿರಬೇಕು. ಆಗ ಭಾರತ ವಿಶ್ವಗುರುವಾಗಲು ಸಾಧ್ಯ. ದೇಶದ ಅಭಿವೃದ್ಧಿಯ ಜೊತೆಗೆ ದೇಶದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ನಾರಾಯಣ ನಾಯ್ಕ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವಸಂತಗಳು ಪೂರ್ಣಗೊಂಡಿವೆ. ಅನೇಕ ಮಹನೀಯರ ಅಂದಿನ ತ್ಯಾಗದ ಫಲದಿಂದ ಸ್ವಾತಂತ್ರ್ಯಗೊಂಡು, ಇಂದು ಅನೇಕ ಕ್ಷೇತ್ರಗಳಲ್ಲಿ ನಾವು ವಿಶೇಷ ಸಾಧನೆ ಮಾಡಿದ್ದೇವೆ. ವ್ಯಾಪಾರ ಮಾಡಲು ಬಂದ ವಿದೇಶಿಗರು ನಮ್ಮಲ್ಲಿರುವ ವಿಭಿನ್ನ ಸಂಸ್ಕೃತಿ, ಭಾಷೆಯನ್ನು ಗಮನಿಸಿ ನಮ್ಮನ್ನು ಒಡೆದು ಆಳಲು ಆರಂಭಿಸಿದರು. ಇಂದು ಕೂಡ ವಿದೇಶಿ ಶಕ್ತಿಗಳು ನಮ್ಮ, ಸಂಸ್ಕೃತಿ, ಇತಿಹಾಸ, ಪರಂಪರೆ, ಆಚರಣೆಯ ಮೇಲೆ ನಿತ್ಯವೂ ಧಾಳಿ ಮಾಡುತ್ತಿವೆ. ಸಾಮಾಜಿಕ ವ್ಯವಸ್ಥೆಯನ್ನು ಪಲ್ಲಟಗೊಳಿಸುತ್ತಿವೆ. ಜಾತಿ, ಮತ, ಪಂಥಗಳ ಜೊತೆಗೆ ನಮ್ಮಲ್ಲಿರುವ ಒಡಕುಗಳನ್ನು ಬದಿಗೊತ್ತಿ ನಾವೆಲ್ಲರೂ ಏಕಭಾವದಿಂದ ದೇಶದ ಏಳಿಗೆಗಾಗಿ ಶ್ರಮಿಸಬೇಕು. ಆಗ ಸುಂದರವಾದ ಭಾರತದ ಕಲ್ಪನೆ ನನಸಾಗುತ್ತದೆ. ಭಾರತ ಇಂದು ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಅಗ್ರಗಣ್ಯವಾಗಿದೆ. ನಮ್ಮಲ್ಲಿ ದೇಶದ ಬಗೆಗೆ ಚಿಂತನೆಗಳು ಬೆಳೆದಾಗ ಅದು ನಮ್ಮ ವೈಯಕ್ತಿಕ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ರಾಜೇಶ ಗೌಡ, ಆನಂದ ಶೆಟ್ಟಿ, ಗಣೇಶ ನಾಯಕ, ದುರ್ಗಪ್ಪ ತಳವಾರ, ರೂಪಾ ಮಗದುಮ, ಗಣೇಶ ಮರಕಾಲ, ಚಂದ್ರಕಾಂತ ಅಥಣಿಮಠ ಹಾಗೂ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು, ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು,. ವನಿತಾ ಮೂಲ್ಯ ವಂದಿಸಿದರು. ಸಮ್ಮೇದ ಗಾಡೇಕರ ನಿರೂಪಿಸಿದರು.