ವಾಯು ರಕ್ಷಣಾ ವ್ಯವಸ್ಥೆಯ ಹೃದಯ ಭಾಗದಲ್ಲಿರುವುದೇ ಶಕ್ತಿಯುತವಾದ ರಡಾರುಗಳು. ಭಾರತದಲ್ಲೇ ತಯಾರಾದ, ಸುಮಾರು 2000 ಕಿಮೀ ದೂರದವರೆಗೂ ಆಕಾಶವನ್ನು ವೀಕ್ಷಿಸುವ ಸಾಮರ್ಥ್ಯವುಳ್ಳ ರಡಾರುಗಳು ನಮ್ಮಲ್ಲಿವೆ. ಮುಂದಿನ ದಿನಗಳಲ್ಲಿ DRDO ಮತ್ತು BEL ಸಂಸ್ಥೆಗಳು ತಯಾರಿಸುವ ರಡಾರುಗಳು ಇನ್ನೂ ಹೆಚ್ಚಿನ ದೂರದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿರೀಕ್ಷೆ ಇದೆ. ಗಡಿ ಪ್ರದೇಶಗಳಲ್ಲಿ ಈ ರಡಾರುಗಳು ಸರಮಾಲೆಯನ್ನೇ ಸೃಷ್ಟಿಸಲಾಗಿದೆ. ಆಕ್ರಮಣಕ್ಕೆ ಬರುತ್ತಿರುವ ಕ್ಷಿಪಣಿಗಳಾಗಲೀ, ಡ್ರೋನುಗಳಾಗಲೀ ಅಥವಾ ಯುದ್ಧವಿಮಾನಗಳಾಗಲಿ, ಒಂದು ರಡಾರಿನ ಕಣ್ತಪ್ಪಿಸಿಕೊಂಡು ಬಂದರೆ ಪರ್ಯಾಯವಾಗಿ ಇನ್ನೊಂದು ರಡಾರ್ ಅದನ್ನು ಹುಡುಕಿ ಕಂಡುಹಿಡಿದು ಬಿಟ್ಟಿರುತ್ತೆ. ಈ ಮಾಹಿತಿಯನ್ನು ಕೂಡಲೇ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಬಹುತೇಕ ಸ್ವಯಂಚಾಲಿತವಾಗಿ ನಡೆಯುವ ಈ ವ್ಯವಸ್ಥೆಯ ಸಮಗ್ರ ನಿರ್ವಹಣೆ ಭಾರತೀಯ ವಾಯುಸೇನೆಯದ್ದಾಗಿರುತ್ತದೆ. ಮುಂದೆ ಇದನ್ನು ಶತ್ರುವೋ, ಮಿತ್ರುವೋ ಎಂದು ಪರಿಷ್ಕರಿಸಲಾಗುತ್ತದೆ. ಅತಿಕ್ರಮಿಸಿ ಬರುತ್ತಿರುವ ಕ್ಷಿಪಣಿ ಶತ್ರು ಎಂದು ಖಚಿತವಾಗುತ್ತಲೇ ಇದನ್ನು ನಿಷ್ಕ್ರಿಯೆಗೊಳಿಸಲು ಪ್ರತಿಬಂಧಕ ಕ್ಷಿಪಣಿಯನ್ನು ಹಾರಿಸುವ ಆದೇಶವನ್ನು ನಿಯಂತ್ರಣ ಕೇಂದ್ರದಿಂದ ಬರುತ್ತದೆ. ಈಗ ಭಾರತದಲ್ಲಿ S-400 ಎನ್ನುವ ಅತ್ಯಂತ ಸಮರ್ಥವಾದ ವಾಯು ರಕ್ಷಣಾ ವ್ಯವಸ್ಥೆ ಇದೆ, ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡೋಣ.
S-400 ವಾಯು ರಕ್ಷಣಾ ವ್ಯವಸ್ಥೆ
ನಮ್ಮ ಪಶ್ಚಿಮ ಮತ್ತು ಉತ್ತರದ ಶತ್ರುರಾಷ್ಟ್ರಗಳಿಗೆ ನಡುಕ ಉಂಟುಮಾಡುತ್ತಿರುವ ಹಾಗೂ ಅಮೆರಿಕಕ್ಕೆ ಕಿರಿಕಿರಿ ಕೊಡುತ್ತಿರುವ ವಿಷಯವೇನೆಂದರೆ ರಷಿಯಾದಿಂದ ಭಾರತಕ್ಕೆ ಬಂದಿರುವ S-400 ವಾಯು ರಕ್ಷಣಾ ವ್ಯವಸ್ಥೆ. ಇದರ ಹೆಸರೇ ಸೂಚಿಸುವಂತೆ ಸುಮಾರು ನಾನೂರು ಕಿಲೋಮೀಟರುಗಳ ಪರಿಧಿಯಲ್ಲಿ ಯಾವುದೇ ಶತ್ರುಗಳ ಯುದ್ಧವಿಮಾನ, ಕ್ಷಿಪಣಿ ಅಥವಾ ಡ್ರೋನುಗಳು ಪ್ರವೇಶಿದರೆ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ಈ ರಕ್ಷಣಾ ವ್ಯವಸ್ಥೆ ಸದ್ಯಕ್ಕೆ ಪ್ರಪಂಚದಲ್ಲೇ ಅತ್ಯಾಧುನಿಕ, ಮಾರಕ ಕ್ಷಿಪಣಿಗಳನ್ನು ಹೊಂದಿರುವ ರಣವ್ಯೂಹ. ನಮ್ಮ ಗಡಿಯನ್ನು ಪ್ರವೇಶಿಸುವ ಮೊದಲೇ ಪ್ರತಿ ಸೆಕೆಂಡಿಗೆ ಐದು ಕಿಲೋಮೀಟರ್ ವೇಗದಲ್ಲಿ ಅಂದರೆ ಪ್ರತಿ ನಿಮಿಷಕ್ಕೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಹಾರಿಹೋಗಿ ಶತ್ರುಗಳ ವಿಮಾನಗಳನ್ನು ಹೊಡೆದುರುಳಿಸುವ ತಾಕತ್ತು ಇರುವ ಈ ಕ್ಷಿಪಣಿಗಳಿಗೆ ನಮ್ಮ ನೆರೆದೇಶಗಳು ಹೆದರಬೇಕಾದ್ದೇ. ಆದರೆ ಇದರಿಂದ ಅಮೆರಿಕಕ್ಕೆ ಏಕೆ ಹೊಟ್ಟೆ ಉರಿ?
ಅಮೆರಿಕಾದಲ್ಲಿ ಸರ್ವಾಧಿಕಾರಿ ಧೋರಣೆಯ ಒಂದು ಕಾನೂನು ಇದೆ… Countering America’s Adversaries Through Sanctions Act (CAATSA)ಅಂತಾ. ಸರಳವಾಗಿ ಹೇಳುವುದಾದರೆ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಯಾವ ದೇಶಕ್ಕೆ ಬೇಕಾದರೂ ಬಹಿಷ್ಕಾರ ಹಾಕಬಹುದು. ತಮ್ಮ F-35 ಯುದ್ಧವಿಮಾನದ ಕೆಲವು ರಹಸ್ಯ ತರಂಗಾಂತರಗಳನ್ನು ಬಯಲಿಗೆಳೆಯುವ ಸಾಮರ್ಥ್ಯ ಈ S-400 ವ್ಯವಸ್ಥೆಗೆ ಇದೆ ಹಾಗಾಗಿ ಯಾವುದೇ ದೇಶ ಈ ಕ್ಷಿಪಣಿಗಳ ವ್ಯೂಹವನ್ನು ಖರೀದಿಸುತ್ತದೆಯೋ ಆ ದೇಶಕ್ಕೆ ಬಹಿಷ್ಕಾರ ಹಾಕಬೇಕು ಎನ್ನುವ ಕಾನೂನನ್ನು ಜಾರಿಗೆ ತಂದಿದೆ. ಈಗಂತೂ ಬಿಡಿ ಭಾರತ ಇಂತಹ ಬೆದರಿಕೆಗಳಿಗೆಲ್ಲಾ ಸೊಪ್ಪು ಹಾಕುತ್ತಿಲ್ಲಾ…S-400 ಭಾರತಕ್ಕೆ ಬಂದಾಗಿದೆ.
ಈ ರಕ್ಷಣಾ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಅರ್ಥ ಮಾಡಿಕೊಳ್ಳಲು ಒಂದಿಷ್ಟು ತಾಂತ್ರಿಕ ಮಾಹಿತಿಯನ್ನು ತಿಳಿಯೋಣ. ಭಾರತ ಐದು ಘಟಕಗಳನ್ನು ಖರೀದಿಸಿದೆ. ಪ್ರತಿಯೊಂದು ಘಟಕದಲ್ಲಿ ಎರಡು ಉಪ ಘಟಕಗಳಿರುತ್ತಾವೆ ಮತ್ತು ಪ್ರತಿಯೊಂದು ಉಪಘಟಕಗಳಲ್ಲಿ ನಾಲ್ಕು ಲಾಂಚರುಗಳಿರುತ್ತಾವೆ. ಲಾಂಚರ್ ಅಂದರೆ ನಾಲ್ಕು ಹಸಿರು ಸಿಲಿಂಡರುಗಳನ್ನು ಹೊತ್ತುಕೊಂಡಿರುವ ವಾಹನ. ಈ ಸಿಲಿಂಡರುಗಳೇ ಹಲವಾರು ಬ್ರಹ್ಮಾಸ್ತ್ರಗಳಂತಿರುವ ಕ್ಷಿಪಣಿಗಳನ್ನು ತುಂಬಿಕೊಂಡಿರುವ ಬತ್ತಳಿಕೆ. ಒಂದೊಂದು ಬತ್ತಳಿಕೆಯಲ್ಲಿ ನಾಲ್ಕು ವಿವಿಧ ಸಾಮರ್ಥ್ಯದ ಕ್ಷಿಪಣಿ ಗಳಿರುತ್ತವೆ. ಒಂದು ದೊಡ್ಡ ಕ್ಷಿಪಣಿ 400 ಕಿಲೋಮೀಟರುಗಳ ದೂರ ಕ್ರಮಿಸುತ್ತದೆ ಇನ್ನುಳಿದವು ತಲಾ 250 ಕಿಮೀ, 120 ಕಿಮೀ ಮತ್ತು 40 ಕಿಮೀ ಗಳ ಪರಿಧಿಯ ಸಾಮರ್ಥ್ಯವುಳ್ಳವಾಗಿರುತ್ತದೆ.
ಈ ವ್ಯೂಹದಲ್ಲಿ ಎರಡು ರಡಾರುಗಳಿರುತ್ತವೆ. ಮೊದಲನೇ ರಡಾರು ಸುಮಾರು ಆರುನೂರು ಕಿಮೀಗಳ ದೂರದಲ್ಲಿರುವ ವಿಮಾನಗಳನ್ನು ಗಮನಿಸುತ್ತಿರುತ್ತದೆ. ಗಡಿದಾಟಿ ಬರುತ್ತಿರುವ ವಿಮಾನ ಶತ್ರಗಳದ್ದು ಎಂದು ಘೋಷಿಸಿದ ಕೂಡಲೇ ಇನ್ನೊಂದು ರಡಾರ್ ಅದನ್ನು ಹಿಂಬಾಲಿಸಲು ಪ್ರಾರಂಭಿಸುತ್ತದೆ. ಶತ್ರು ವಿಮಾನ ಅಥವಾ ಕ್ಷಿಪಣಿ ನಾನೂರು ಕಿಮೀ ಪರಿಧಿಯೊಳಗೆ ಬಂದ ಕೂಡಲೇ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಗುತ್ತದೆ. ಹೀಗೆ ಒಂದೇ ಸಮಯದಲ್ಲಿ ನೂರು ಕ್ಷಿಪಣಿಗಳನ್ನು ಅಥವಾವಿಮಾನಗಳನ್ನು ಹಿಂಬಾಲಿಸಿ, 72 ಕ್ಷಿಪಣಿಗಳನ್ನು ಪ್ರಯೋಗಿಸಿ ಶತ್ರು ವಿಮಾನಗಳನ್ನು ಹೊಡೆದುರಳಿಸುವ ಸಾಮರ್ಥ್ಯ ಈ ವ್ಯೂಹಕ್ಕೆ ಇದೆ. ಈಗ ಅರ್ಥವಾಯಿತೆ ನಮ್ಮ ನೆರೆಹೊರೆಯವರಿಗೆ ಯಾಕೆ ಸಣ್ಣಗೆ ಬೆವರಿಳಿಯುತ್ತಿದೆ ಅಂತಾ.
ನಗರ ಮತ್ತು ಅನುಸ್ಥಾಪನೆಗಳ ರಕ್ಷಣೆ
ಸುಮಾರು 100 ಕಿಮೀ ಕಾರ್ಯವ್ಯಾಪ್ತಿಯಲ್ಲಿ ಬರಾಕ್-8, ಆಕಾಶ್ ಮತ್ತು ಸ್ಪೈಡರ್ ಎನ್ನುವ ಪ್ರತಿಬಂಧಕ ಕ್ಷಿಪಣಿಗಳು ಶತ್ರುಗಳ ಕ್ಷಿಪಣಿಗಳನ್ನು ನಿಷ್ಕ್ರಿಯೆಗೊಳಿಸಿ ನಮ್ಮ ವಾಯುನೆಲೆಗಳನ್ನು, ಅಣುಸ್ಥಾವರಗಳನ್ನು ಪ್ರಮುಖ ಬಂದರುಗಳನ್ನು ಮತ್ತು ನಗರಗಳನ್ನು ರಕ್ಷಿಸುವ ಕೆಲಸ ಮಾಡುತ್ತವೆ. ಬರಾಕ್-8 ಭಾರತ ಮತ್ತು ಇಸ್ರೇಲಿನ ಜಂಟಿ ಕಾರ್ಯಾಚರಣೆಯಲ್ಲಿ ಉತ್ಪಾದಿಸುತ್ತಿರುವ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ. ಭಾರತೀಯ ವಾಯುಸೇನೆ ಮತ್ತು ನೌಕಾದಳಗಳಲ್ಲಾಗಲೇ ಬರಾಕ್ -8 ಸೇರ್ಪಡೆಯಾಗಿದೆ, ಸದ್ಯದಲ್ಲೇ ಭೂಸೇನೆಗೂ ಈ ಕ್ಷಿಪಣಿಗಳನ್ನು ಒದಗಿಸಲಾಗುತ್ತದೆ. ಇನ್ನು ಡಾಕ್ಟರ್ ಅಬ್ದುಲ್ ಕಲಾಮರ ನೇತೃತ್ವದಲ್ಲಿ ಪ್ರಾರಂಭವಾದ ಕ್ಷಿಪಣಿ ಅಭಿವೃದ್ಧಿ ಯೋಜನೆಯಡಿಯಲ್ಲಿ ತಯಾರಾದ ಆಕಾಶ್ ಕ್ಷಿಪಣಿ 20 ಕಿಮೀ ಕಾರ್ಯವ್ಯಾಪ್ತಿಯಿಂದ ಪ್ರಾರಂಭವಾಗಿ ಕ್ರಮೇಣ ಹಲವಾರು ಯಶಸ್ವಿ ಪ್ರಯೋಗಗಳ ನಂತರ ಈಗ ಅದರ ಕಾರ್ಯವ್ಯಾಪ್ತಿ ಸುಮಾರು 80 ಕಿಮೀವರೆಗೆ ವೃದ್ಧಿಯಾಗಿದೆ.
ಭವಿಷ್ಯತ್ತಿನ ಯೋಜನೆಗಳು
ಖಾಸಗಿ ಸಂಸ್ಥೆಗಳು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಹಲವಾರು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಗತವಾಗಿವೆ. “ ಪ್ರಾಜೆಕ್ಟ್ ಕುಶ “ ಎನ್ನುವ ಯೋಜನೆಯಡಿಯಲ್ಲಿ ರಷಿಯಾದ S-400 ಗೆ ಸರಿಸಮನಾದ ಕಾರ್ಯಕ್ಷಮತೆ ಹೊಂದುವ ವಾಯು ರಕ್ಷಣಾ ವ್ಯವಸ್ಥೆಯನ್ನು ಸದ್ಯದಲ್ಲೇ ನಿರ್ಮಿಸಲಿದೆ.
ಖಂಡಾಂತರ ಕ್ಷಿಪಣಿಗಳಿಂದ ರಕ್ಷಣೆ ನೀಡುವ ನೂತನ ಯೋಜನೆ, Ballistic Missile Defence (BMD)
ಇದರ ಬಗೆಗಿನ ಮಾಹಿತಿ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ ಇದೊಂದು ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯಾಗುವುದರಲ್ಲಿ ಸಂದೇಹವಿಲ್ಲ.
ಕ್ಷಿಪಣಿ ಗಳ ವಿಂಗಡನೆ ಹೇಗಿದೆ
ಕ್ಷಿಪಣಿಗಳನ್ನು ಅವುಗಳ ಕಾರ್ಯಕ್ಷಮತೆಯ ವ್ಯಾಪ್ತಿ, ಉದ್ದೇಶ ಮತ್ತು ಮಾರ್ಗನಿರ್ದೇಶನದ ವ್ಯವಸ್ಥೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.
ಖಂಡಾಂತರ ಕ್ಷಿಪಣಿ: ಈ ಕ್ಷಿಪಣಿಗಳನ್ನು ಎತ್ತರದ ಪಥದಲ್ಲಿ, ಕೆಲವೊಮ್ಮೆ ಭೂಮಿಯ ವಾತಾವರಣಕ್ಕೂ ಮೇಲೆ ಹೋಗಿ, ಪುನಃ ಭೂವಾತಾವರಣಕ್ಕೆ ಮರಳಿ ನೂರಾರು, ಸಾವಿರಾರು ಮೈಲಿ ದೂರದ ಶತ್ರುಗಳ ತಾಣದ ಮೇಲೆ ಸ್ಪೋಟಗೊಳ್ಳುತ್ತದೆ.
ಕ್ರೂಸ್ ಕ್ಷಿಪಣಿ: ಈ ಕ್ಷಿಪಣಿಗಳು ಭೂಮಿಗೆ ಸಮಾನಾಂತರವಾಗಿ ವಿಮಾನದಂತೆ ಹಾರುತ್ತವೆ. ದೊಡ್ಡಗಾತ್ರದ ಸಿಡಿತಲೆಯನ್ನು ಹೊತ್ತ ಈ ಕ್ಷಿಪಣಿಗಳು ಶಬ್ದವೇಗಕ್ಕೂ ಹೆಚ್ಚಿನ ವೇಗದಲ್ಲಿ ಹಾರುತ್ತಾ ಶತ್ರುಗಳ ತಾಣದ ಮೇಲೆ ದಾಳಿ ನಡೆಸುತ್ತವೆ.
ನೆಲದಿಂದ ಆಕಾಶಕ್ಕೆ ಹಾರಿಸುವ ಕ್ಷಿಪಣಿಗಳು: ಈ ಕ್ಷಿಪಣಿಗಳನ್ನು ಆಕಾಶದಲ್ಲಿ ಹಾರುತ್ತಿರುವ ಶತ್ರುಗಳ ವಿಮಾನ ಅಥವಾ ಕ್ಷಿಪಣಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಆಕಾಶದಲ್ಲೇ ನಿಷ್ಕ್ರಿಯೆಗೊಳಿಸಲು ಪ್ರಯೋಗಿಸಲಾಗುತ್ತದೆ.
ಆಕಾಶದಿಂದ ಹಾರಿಸುವ ಕ್ಷಿಪಣಿಗಳು: ಈ ಕ್ಷಿಪಣಿಗಳನ್ನು ಯುದ್ಧವಿಮಾನಗಳಿಂದ ಶತ್ರುಗಳ ವಿಮಾನಗಳ ಮೇಲೆ ಅಥವಾ ಶತ್ರುಗಳ ತಾಣಗಳ ಮೇಲೆ ದಾಳಿ ನಡೆಸಲು ಪ್ರಯೋಗಿಸಲಾಗುತ್ತದೆ.
ಹಡಗುಗಳ ಮೇಲೆ ಹಾರಿಸುವ ಕ್ಷಿಪಣಿಗಳು: ಈ ವಿಶೇಷ ವಿನ್ಯಾಸದ ಕ್ಷಿಪಣಿಗಳನ್ನು ದೊಡ್ಡಗಾತ್ರದ ಹಡಗುಗಳ ಮೇಲೆ ದಾಳಿ ನಡೆಸಲು ವಿಮಾನದಿಂದಾಗಲೀ ಅಥವಾ ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾಗುತ್ತದೆ.
ಯುದ್ಧ ಟ್ಯಾಂಕ್ ವಿರೋಧಿ ಕ್ಷಿಪಣಿ: ಬಲವಾದ ಲೋಹದ ಯುದ್ಧ ಟ್ಯಾಂಕ್ಗಳನ್ನು ಭೇದಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಗಳನ್ನು ಕರಾರುವಕ್ಕಾಗಿ ಟ್ಯಾಂಕ್ಗಳ ಮೇಲೆ ದಾಳಿ ಮಾಡಲು GPS ಸಹಾಯದಿಂದಲೋ ಅಥವಾ ಲೇಸರ್ ಕಿರಣಗಳ ಮೂಲಕ ಮಾರ್ಗದರ್ಶನದ ವ್ಯವಸ್ಥೆ ಇರುತ್ತದೆ.
✍️…ವಿಂಗ್ ಕಮಾಂಡರ್ ಸುದರ್ಶನ