ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಗಂಡನಾದವನು ಹೆಂಡತಿ ಮೇಲೆ ದೌರ್ಜನ್ಯ ನಡೆಸುವ ಘಟನೆ ನಡೆಯುತ್ತಿದೆ. ವರದಕ್ಷಿಣೆ ಸಂಬಂಧವಾಗಿ ಮತ್ತೊಂದು ಘಟನೆ ಇದೀಗ ವರದಿಯಾಗಿದೆ.
ತವರಿನಿಂದ ಕೇಳಿದಾಗಲೆಲ್ಲಾ ವರದಕ್ಷಿಣೆ ತಂದು ಕೊಡುವುದಕ್ಕೆ ವಿರೋಧಿಸಿದ ಪತ್ನಿಯನ್ನು ಕೊಂದು ಮಂಚದ ಕೆಳಗೆ ಮಲಗಿಸಿ ಪತಿ ನಾಪತ್ತೆಯಾದ ಘಟನೆ ನಡೆದಿದೆ.
ಮೂರು ದಿನದ ಹಿಂದೆ ಈ ಘಟನೆ ನಡೆದಿದೆ. ಪತಿರಾಯನಾದ ಆರೋಪಿ ಆಕಾಶ ಕುಂಬಾರ ಈ ದುಷ್ಕತ್ಯ ಎಸಗಿದ್ದಾನೆ. ಮಾತ್ರವಲ್ಲ ಈತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಸಾಕ್ಷಿ ಆಕಾಶ ಕುಂಬಾರ (20) ಕೊಲೆಯಾದ ಮಹಿಳೆ.
ನಾಲ್ಕು ತಿಂಗಳ ಹಿಂದೆಯೇ ಆಕಾಶ ಜೊತೆಗೆ ಸಾಕ್ಷಿಯ ಮದುವೆಯಾಗಿತ್ತು.
ಮದುವೆಯ ನಂತರ ತವರಿನಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಆಕೆಯ ಗಂಡ ಆಕಾಶ ಇನ್ನಿಲ್ಲದಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಕೊಲೆ ಮಾಡಿ ಪತಿ ಪರಾರಿಯಾಗಿದ್ದು, ಮುಂಬೈಗೆ ಹೋಗಿದ್ದ. ಅತ್ತೆ ಮರಳಿ ಮನೆಗೆ ಬಂದಾಗ ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ಪೊಲೀಸರ ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಭೇಟಿ ನೀಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.