ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್ಎಲ್ಜೆಪಿ) ಮುಖ್ಯಸ್ಥ ಪಶುಪತಿ ಪರಾಸ್ ಸೋಮವಾರ ತಮ್ಮ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ)ಕ್ಕೆ ಗುಡ್ ಬೈ ಹೇಳುತ್ತಿದೆ ಎಂದು ಪ್ರಕಟಿಸಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಘೋಷಣೆ ಬಂದಿದೆ. ಇದು ಅವರು ಲಾಲು ಪ್ರಸಾದ ಅವರು ರಾಷ್ಟ್ರೀಯ ಜನತಾ ದಳದ ನೇತೃತ್ವದ ಮಹಾಘಟಬಂಧನ ಸೇರುತ್ತಾರೋ ಅಥವಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಾರೋ ಎಂಬ ಕುತೂಹಲಕ್ಕೆ ಕಾರಣವಾಗಿದೆ. 2014 ರಿಂದ ನಿಷ್ಠಾವಂತ ಮಿತ್ರನಾಗಿರುವ ತಮ್ಮ ಪಕ್ಷವನ್ನು 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಒಂದೇ ಸ್ಥಾನ ನೀಡಿದೆ ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಪಶುಪತಿ ಪರಾಸ್ ಹೇಳಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಆರ್ಎಲ್ಜೆಪಿ ರಾಜ್ಯದಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪರಾಸ್ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವು ಸಿದ್ಧತೆ ನಡೆಸುತ್ತಿದ್ದು, ಬಿಹಾರದ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಿದೆ. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎನ್ಡಿಎ ತನ್ನ ಪಕ್ಷಕ್ಕೆ ಅನ್ಯಾಯ ಮಾಡಿದೆ ಎಂದು ಪರಾಸ್ ಹೇಳಿದ್ದಾರೆ.
“ನಾನು 2014 ರಿಂದ ಇಲ್ಲಿಯವರೆಗೆ ಎನ್ಡಿಎಯಲ್ಲಿದ್ದೆ. ನಾವು ಎನ್ಡಿಎ (NDA)ಯ ನಿಷ್ಠಾವಂತ ಮಿತ್ರರಾಗಿದ್ದೆವು. ಲೋಕಸಭಾ ಚುನಾವಣೆಗಳು ನಡೆದಾಗ, ಎನ್ಡಿಎ ಒಕ್ಕೂಟದವರು ನಮ್ಮ ಪಕ್ಷಕ್ಕೆ ಅನ್ಯಾಯ ಮಾಡಿದರು. ಏಕೆಂದರೆ ನಮ್ಮದು ದಲಿತ ಪಕ್ಷವಾಗಿದೆ. ಆದರೂ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ, ನಮ್ಮ ಪಕ್ಷವು ಚುನಾವಣೆಯಲ್ಲಿ ಎನ್ಡಿಎಯನ್ನು ಬೆಂಬಲಿಸಲು ನಿರ್ಧರಿಸಿತು” ಎಂದು ಪರಾಸ್ ಹೇಳಿದರು.
ಆರ್ಎಲ್ಜೆಪಿ ಮಹಾಮೈತ್ರಿಕೂಟಕ್ಕೆ ಸೇರುತ್ತದೆಯೇ?
ಏತನ್ಮಧ್ಯೆ, ಪರಾಸ್ ಅವರು ಮಹಾ ಮೈತ್ರಿಕೂಟ (ಮಹಾಘಟಬಂಧನ) ಜೊತೆಗೆಗೆ ಕೈಜೋಡಿಸುತ್ತಾರೆಯೇ ಎಂಬುದರ ಕುರಿತು ಸೂಕ್ಷ್ಮ ಸುಳಿವು ನೀಡಿದರು. ಮಹಾಮೈತ್ರಿಕೂಟವು ಸರಿಯಾದ ಗೌರವ ಮತ್ತು ಸೂಕ್ತ ಸ್ಥಾನವನ್ನು ನೀಡಿದರೆ, ಭವಿಷ್ಯದಲ್ಲಿ ಆರ್ಎಲ್ಜೆಪಿ ಅವರೊಂದಿಗೆ ಸೇರಲು ಪರಿಗಣಿಸಬಹುದು ಎಂದು ಅವರು ಹೇಳಿದರು.
“ನಮಗೆ ಒತ್ತಡ ಬಂದಿತು… ನಾವು ಜನರ ನಡುವೆ ಹೋಗುತ್ತಿದ್ದೇವೆ ಮತ್ತು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ 243 ಸ್ಥಾನಗಳಿಗೂ ತಯಾರಿ ನಡೆಸುತ್ತಿದ್ದೇವೆ… ಮಹಾಘಟಬಂಧನ ಸರಿಯಾದ ಸಮಯದಲ್ಲಿ ನಮಗೆ ಸರಿಯಾದ ಗೌರವವನ್ನು ನೀಡಿದರೆ, ಭವಿಷ್ಯದಲ್ಲಿ ನಾವು ಖಂಡಿತವಾಗಿಯೂ ಅವರ ಜೊತೆ ರಾಜಕೀಯದ ಬಗ್ಗೆ ಯೋಚಿಸುತ್ತೇವೆ” ಎಂದು ಆರ್ಎಲ್ಜೆಪಿ ಮುಖ್ಯಸ್ಥ ಪಶುಪತಿ ಪರಾಸ್ ತಿಳಿಸಿದರು.
ಕಳೆದ 6-8 ತಿಂಗಳುಗಳಲ್ಲಿ ನಡೆದ ಯಾವುದೇ ಎನ್ಡಿಎ ಸಭೆಗಳಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಆರ್ಎಲ್ಜೆಪಿಯ ಹೆಸರನ್ನು ಎಂದಿಗೂ ಉಲ್ಲೇಖಿಸಿಲ್ಲ, ಆದರೆ ತಮ್ಮನ್ನು ಬಿಹಾರದಲ್ಲಿ “ಐವರು ಪಾಂಡವರು” ಎಂದು ಕರೆದುಕೊಳ್ಳುತ್ತಾರೆ ಎಂದು ಪರಾಸ್ ಆರೋಪಿಸಿದ್ದಾರೆ. “ಬಿಹಾರದಲ್ಲಿ ಎನ್ಡಿಎ ಸಭೆ ನಡೆದಾಗಲೆಲ್ಲಾ, ಬಿಜೆಪಿ ರಾಜ್ಯ ಮುಖ್ಯಸ್ಥರು ಮತ್ತು ಜೆಡಿಯು ರಾಜ್ಯ ಮುಖ್ಯಸ್ಥರು ಬಿಹಾರದಲ್ಲಿ ‘ಐವರು ಪಾಂಡವರು’ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಅವರು ನಮ್ಮ ಪಕ್ಷದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಿಲ್ಲ” ಎಂದು ಪರಾಸ್ ಹೇಳಿದರು.
ರಾಮವಿಲಾಸ ಪಾಸ್ವಾನ್ ಅವರ ನಿಧನದ ನಂತರ, 2021 ರಲ್ಲಿ ಲೋಕ ಜನಶಕ್ತಿ ಪಕ್ಷ ವಿಭಜನೆ ಮಾಡಿದ ಪರಾಸ್, ಕೇಂದ್ರ ಸಚಿವರಾದರು. ಕಳೆದ ವರ್ಷ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಪರಾಸ್, ಬಿಜೆಪಿಯು ತನ್ನ ಸಹೋದರ ರಾಮವಿಲಾಸ ಪಾಸ್ವಾನ್ ಪುತ್ರ ಚಿರಾಗ ಪಾಸ್ವಾನ್ ಅವರಿಗೆ ಬೆಂಬಲ ನೀಡುವುದಕ್ಕೆ ವಿರೋಧಿಸಿದರು. ಚಿರಾಗ ಪಾಸ್ವಾನ್ ಹಾಜಿಪುರ ಕ್ಷೇತ್ರದಲ್ಲಿ ಟಿಕೆಟ್ ಪಡೆದು ಜಯಗಳಿಸಿದರು. ಈ ಸ್ಥಾನವನ್ನು ಅನೇಕ ಬಾರಿ ರಾಮವಿಲಾಸ ಪಾಸ್ವಾನ್ ಪ್ರತಿನಿಧಿಸಿದ್ದರು. ನಂತರ 2024 ರವರೆಗೆ ಪಶುಪತಿ ಪಾರಸ್ ಹೊಂದಿದ್ದರು.