ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಅಂತರ್ ಮಹಾವಿದ್ಯಾಲಯಗಳ ಟೆಕ್ವಾಂಡೊ ಪಂದ್ಯಾವಳಿ ಆಯ್ಕೆ ಪ್ರಕ್ರಿಯೆ 2025-26ನೇ ಸಾಲಿನ ಉದ್ಘಾಟನಾ ಸಮಾರಂಭವನ್ನು ಬೆಳಗಾವಿಯ ಕ್ರೀಡಾ ಹಾಗೂ ಯುವ ಸಬಲೀಕರಣ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟಕರಾಗಿ ಬೆಳಗಾವಿಯ ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ವಾಲಿಬಾಲ್ ತರಬೇತಿದಾರ ಬಸವರಾಜ ಹೊಸಮಠ ಮಾತನಾಡಿ, ನಮ್ಮ ದೇಶವು ಕ್ರೀಡಾಕ್ಷೇತ್ರದಲ್ಲಿ ಬೆಳೆಯಬೇಕು. ನಮ್ಮ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಸದೃಢ ಗೊಳ್ಳಬೇಕೆಂದರು .
ಅಧ್ಯಕ್ಷತೆಯನ್ನು ವಹಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜೆ.ಎಸ್. ಕವಳೇಕರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಹೇಳಿದರು.
ಟೆಕ್ವಾಂಡೊ ಹಾಕಿ ಸಮಿತಿ ಸದಸ್ಯರಾಗಿ ಶ್ರೀಪಾದ್ ರಾವ್ ಅಂತರಾಷ್ಟ್ರೀಯ ತರಬೇತಿದಾರ ಪ್ರಭಾಕರ ಶೇಡಬಾಳ ಮತ್ತು ಡಾ. ಬಸವರಾಜ ಮುತ್ನಾಳ ಉಪಸ್ಥಿತರಿದ್ದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳ ಕ್ರೀಡಾಪಟುಗಳು ಹಾಗೂ ಸಂಯೋಜಕರು ಭಾಗವಹಿಸಿದ್ದರು.
ಕಾಲೇಜಿನ ದೈಹಿಕ ನಿರ್ದೇಶಕ ಡಾ. ಶಿವಾನಂದ ಬುಲಬುಲಿ ಸ್ವಾಗತಿಸಿದರು. ಕಾಲೇಜಿನ ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ ವಿ. ಕೆ.ಗಾಣಿಗೇರ ಪರಿಚಯಿಸಿದರು. ಡಾ. ಮಹೇಶ ಬುರಡ ವಂದಿಸಿದರು. ಮಲ್ಲಿಕಾ ಗೌಡರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.


