ಮಕ್ಕಳಲ್ಲಿ ನಿಸ್ವಾರ್ಥತೆ, ಸತ್ಯ, ಪವಿತ್ರತೆ ಬೆಳೆಸೋಣ
ಬೆಳಗಾವಿ :
ಮಕ್ಕಳನ್ನು ಪ್ರೀತಿಯಿಂದ ಕಾಣುವುದೇ ಇಂದಿನ ದೊಡ್ಡ ಸಂಪತ್ತು. ಪರಿಸ್ಥಿತಿಗಳ ಒತ್ತಡಕ್ಕೊಳಗಾಗಿ ಅವರನ್ನು ನಿರ್ಲಕ್ಷಿಸುತ್ತಿದ್ದೇವೆ. ಪೋಷಕರ ಪ್ರೀತಿಯಿಂದ ವಂಚಿತವಾಗುವ ಮಗುವಿನ ಭವಿಷ್ಯ ಏನಾಗಬಹುದು ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ ಎಂದು ಬೆಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಚಂದ್ರಶೇಖರ ಎಚ್.ಬಿ. ಆತಂಕ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ 131ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರವಿವಾರ ನಗರದ ಕೋಟೆ ಆವರಣದ ರಾಮಕೃಷ್ಣ ಮಿಶನ್ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಶ್ರೇಷ್ಠ ಮಕ್ಕಳ ನಿರ್ಮಾಣ ವಿಷಯವಾಗಿ ಪೋಷಕರ ಕಾರ್ಯಾಗಾರದಲ್ಲಿ ಮಕ್ಕಳ ಪಾಲನಾ ಶೈಲಿಗಳು ವಿಷಯವಾಗಿ ಉಪನ್ಯಾಸ ನೀಡಿದರು.
ಆಧುನಿಕ ಬಿರುಗಾಳಿಗೆ ಸಿಕ್ಕಿ ನಮ್ಮ ವ್ಯವಸ್ಥೆ ನಲುಗಿದೆ. ಈ ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆ ಇದ್ದಾಗ ಮೌಲ್ಯವನ್ನು ಕಲಿಸಲಾಗುತ್ತಿತ್ತು. ಆದರೆ, ಇಂದು ಬದುಕಿನ ಅನಿವಾರ್ಯತೆಗೆ ಸಿಕ್ಕಿ ವಿಭಕ್ತ ಕುಟುಂಬಗಳಾಗಿ ಚೂರು ಚೂರಾಗುತ್ತಿದೆ ಎಂದು ಹೇಳಿದರು.
ಮಕ್ಕಳಿಗೆ ಅತಿ ಪ್ರೀತಿಯೂ ಅಪಾಯಕಾರಿ. ಸಣ್ಣ ವಯಸ್ಸಿನಲ್ಲೇ ಅವರು ಕೇಳುವ ಎಲ್ಲಾ ಬೇಕು ಬೇಡಗಳನ್ನು ನೀಡುತ್ತಿದ್ದೇವೆ. ಆದರೆ, ಅವರೇ ಮುಂದೆ ವಿಧೇಯತೆಯೇ ತೋರಿಸದಿರುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿ ಅವರಿಗೆ ಜೀವನದ ಮೌಲ್ಯಗಳನ್ನು ಹೇಳಿಕೊಡಬೇಕು. ನಾವು ಮಕ್ಕಳಂತಾಗೋಣ. ಆದರೆ, ಅವರನ್ನು ನಮ್ಮಂತಾಗುವ ನಿರೀಕ್ಷೆ ಮಾಡದಿರೋಣ ಎಂದರು.
ತಾಯಂದಿರು ತಮ್ಮ ಮಕ್ಕಳಿಗೆ ಹೆಚ್ಚು ಸಮಯ ಮೀಸಲಿಡಬೇಕು. ಅವರಿಗೆ ಜಂಕ್ ಪುಡ್ ಬದಲಿಗೆ ಪೌಷ್ಟಿಕ ಆಹಾರ ನೀಡಬೇಕು. ತಪ್ಪು ಮಾಡಿದಾಗ ಗಮನಿಸಿ ತಿಳಿ ಹೇಳಬೇಕು. ಪ್ರೀತಿ, ಅನನ್ಯತೆ ನೀಡಬೇಕು. ಅವರಿಂದ ಹೆಚ್ಚಿನ ನಿರೀಕ್ಷೆ ಸಹಜ. ಆದರೆ, ಕಟ್ಟುಪಾಡು ವಿಧಿಸಬಾರದು. ನಮ್ಮ ವ್ಯಕ್ತಿತ್ವವೇ ಅವರಿಗೆ ರೋಲ್ ಮಾಡೆಲ್ ಆಗುವ ನಿಟ್ಟಿನಲ್ಲಿ ಅವರ ವ್ಯಕ್ತಿತ್ವವನ್ನು ರೂಪಿಸಬೇಕು. ಅವರಲ್ಲಿ ಪ್ರೀತಿ-ಕರುಣೆ, ಮಾನವೀಯ ಮೌಲ್ಯಗಳನ್ನು ತುಂಬಬೇಕು ಎಂದು ಕಿವಿಮಾತು ಹೇಳಿದರು.
ಪೋಷಕರ ಗುರಿ-ಮಕ್ಕಳ ಶ್ರೇಷ್ಠ ನಿರ್ಮಾಣ ವಿಷಯವಾಗಿ
ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದಜೀ ಮಹಾರಾಜ ಮಾತನಾಡಿ, ಶ್ರೇಷ್ಠ ಮಕ್ಕಳ ನಿರ್ಮಾಣಕ್ಕೆ ಜ್ಞಾನದ ಅವಶ್ಯಕತೆ ಇದೆ. ಆ ಜ್ಞಾನವು ನಿಸ್ವಾರ್ಥತೆ, ಸತ್ಯ ಮತ್ತು ಪವಿತ್ರತೆಗಳಿಂದ ಬರುತ್ತದೆ. ಈ ಮೂರು ಬರಬೇಕಾದರೆ ಪ್ರಬಲ ಇಚ್ಛಾ ಶಕ್ತಿ, ಆತ್ಮವಿಶ್ವಾಸ ಇರಬೇಕು. ಅದರೊಂದಿಗೆ ಧ್ಯಾನ ಮಾಡುವುದರೊಂದಿಗೆ ಆತ್ಮಜ್ಞಾನವನ್ನು ಹೊಂದಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಲ್ಲಿ ನಿಸ್ವಾರ್ಥತೆ, ಸತ್ಯ, ಪವಿತ್ರತೆ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಭೂಮಿಯಲ್ಲಿ ಅತ್ಯಂತ ಶ್ರೇಷ್ಠ ಪೋಷಕರಿದ್ದರೆ ಅದಕ್ಕೆ ಭಾರತವೇ ಸಾಕ್ಷಿ. ಶಿವಾಜಿ, ವಿವೇಕಾನಂದ, ಅಬ್ದುಲ್ ಕಲಾಂ ಮುಂತಾದವರನ್ನು ಬೆಳೆಸಿದ ಪೋಷಕರೇ ಇದಕ್ಕೆ ಉದಾಹರಣೆ ಎಂದು ಹೇಳಿದರು.
ಶ್ರೇಷ್ಠ ಮಕ್ಕಳ ನಿರ್ಮಾಣಕ್ಕೆ ಜ್ಞಾನದ ಅವಶ್ಯಕತೆ ಇದೆ. ಹಾಗಾದರೆ ಯಾರು ಶ್ರೇಷ್ಠ ಮಕ್ಕಳು. ಆದರ್ಶ ನಡೆ ನುಡಿ ಹಾಗೂ ಕೃತಿಯಂತೆ ನಡೆಯುವವರೇ ಉತ್ತಮ ಮಕ್ಕಳು. ಮಕ್ಕಳಲ್ಲಿ ಶ್ರೇಷ್ಠ ಗುಣಗಳನ್ನು ನಾವು ಬೆಳೆಸಬೇಕು. ಸ್ವಾರ್ಥಿಗಳನ್ನು ಈ ಪ್ರಪಂಚ ಶ್ರೇಷ್ಠ ವ್ಯಕ್ತಿ ಎಂದು ಕರೆದಿಲ್ಲ. ನಿಸ್ವಾರ್ಥತೆ ಹಾಗೂ ದೇವರು ಬೇರೆಬೇರೆಯಲ್ಲ. ಮಾತು, ಕೃತಿ, ಮನಸ್ಸು ಒಂದೇ ರೀತಿ ಇರಬೇಕು. ನಮ್ಮಂತೆ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ.
ನಿಸ್ವಾರ್ಥತೆ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.
ಮಕ್ಕಳಿಗೆ ಉಪದೇಶ ಕೊಡಲು ಹೋಗಬೇಡಿ. ಅದರಿಂದ ಯಾರು ಉದ್ದಾರವಾಗಲು ಸಾಧ್ಯವಿಲ್ಲ. ಮಗುವಿನಲ್ಲಿ ನಿಸ್ವಾರ್ಥತೆ ಮೂಡಿಸಿದಾಗ ಶ್ರೇಷ್ಠನಾಗಲು ಸಾಧ್ಯ. ಮಗುವಿಗೆ ಬಾಲ್ಯದಲ್ಲೇ ಈ ಗುಣವನ್ನು ಬೆಳೆಸಬೇಕು. ನಿಸ್ವಾರ್ಥತೆಯಂತೆ
ಸತ್ಯವನ್ನು ಸಹಾ ಮಗುವಿನಲ್ಲಿ ಮೂಡಿಸಬೇಕು. ಸುಳ್ಳು ವ್ಯಕ್ತಿಯನ್ನು ಈ ಸಮಾಜ ಎಂದೂ ಒಪ್ಪಿಕೊಳ್ಳದು.
ಸತ್ಯ ಅಳವಡಿಕೆ ಸ್ವಲ್ಪ ಕಷ್ಟವಾಗಬಹುದು. ಆದರೆ, ಅದರಿಂದ ಸಮಾಜದ ಉದ್ದಾರ ಸಾಧ್ಯವಿದೆ. ಸತ್ಯದಿಂದ ನಾವು ಶಕ್ತಿವಂತರಾಗುವುದಲ್ಲದೇ ಅದರಿಂದ ಶಾಶ್ವತ ಸುಖ ಸಿಗುತ್ತದೆ. ಸಮಾಜ ಸತ್ಯಕ್ಕೆ ಬಹಳ ಬೆಲೆ ಕೊಡುತ್ತದೆ ಎಂದರು.
ಜಗತ್ತಿನ ಬೇರೆ ಯಾವ ದೇಶದಲ್ಲೂ ಭಾರತದಲ್ಲಿರುವವರಿಗೆ ಇರುವ ಆದರ್ಶ ಗುಣ ಇಲ್ಲ.
ಇಂತಹ ವಿಭಿನ್ನ ದೇಶ ನಮ್ಮದು ಎಂದರು.
ಮೂರನೇ ಆದರ್ಶವೇ ಪವಿತ್ರತೆ. ಜತೆಗೆ ಪ್ರಾಮಾಣಿಕತೆಯಿಂದ ಬದುಕು ನಡೆಸಬೇಕು. ಪೋಷಕರು ಈ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಸ್ವಾಮಿ ವಿವೇಕಾನಂದರಲ್ಲಿ ಇಂಥ ಗುಣ ಇದ್ದದ್ದರಿಂದಲೇ ಶ್ರೇಷ್ಠರಾದರು. ದೇವರು ಈ ಗುಣಗಳಿಗೆ ಒಲಿಯುತ್ತಾನೆ. ಈ ಗುಣ ಅಳವಡಿಸಿಕೊಳ್ಳಲು ದೃಢವಾದ
ಇಚ್ಛಾಶಕ್ತಿ ಬೇಕು. ಮಕ್ಕಳಲ್ಲಿ ಇಚ್ಛಾಶಕ್ತಿ ನಿರ್ಮಾಣ ಮಾಡಬೇಕು. ಮಕ್ಕಳಿಗೆ ನೀನು ಸರಿಯಿಲ್ಲ, ದಡ್ಡ, ನೀನು ಹೀಗೆ ಮಾಡುವೆ ಎಂದು ಮೊದಲೇ ಗೊತ್ತಿತ್ತು ಹೇಳಬಾರದು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.
ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಬಹುದೊಡ್ಡ ಪ್ರಮಾಣದಲ್ಲಿ ಆತ್ಮವಿಶ್ವಾಸ ಇರಬೇಕು. ಆತ್ಮವಿಶ್ವಾಸ ಇಲ್ಲದ ವ್ಯಕ್ತಿ ಎಂದಿಗೂ ಮಹಾನ್ ವ್ಯಕ್ತಿಯಾಗಲಾರ. ಇಚ್ಛಾಶಕ್ತಿ, ಆದರ್ಶ ಮೂಡಿಸಬೇಕು. ಎಲ್ಲಾ ವಿದ್ಯೆಗಳಲ್ಲಿ ಆಧ್ಯಾತ್ಮಿಕ ಧ್ಯಾನವೇ ಶ್ರೇಷ್ಠ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆತ್ಮಧ್ಯಾನ ಕಲಿಸಬೇಕು. ಅಧ್ಯಾತ್ಮಿಕವೇ ದೊಡ್ಡ ಗಿಫ್ಟ್. ಅದನ್ನು ಹೊಂದಿದ್ದರೆ ಜೀವನ ಪರಿಪೂರ್ಣನಾಗಲು ಸಾಧ್ಯ ಎಂದು ಹೇಳಿದರು.
ರಾಮಾಯಣ, ಮಹಾಭಾರತ, ಭಗವದ್ಗೀತೆ,ಉಪನಿಷತ್ತಿನ ಶ್ರೇಷ್ಠ ವಿಚಾರ
ಮಕ್ಕಳಿಗೆ ಹೇಳಿ. ಅವರಲ್ಲಿ ಆತ್ಮವಿಶ್ವಾಸ ಬೆಳೆಸಿ. ನಿಸ್ವಾರ್ಥತೆ, ಸತ್ಯ, ಪವಿತ್ರತೆಯನ್ನು ಕಲಿಸಿಕೊಡಬೇಕು ಎಂದು
ಹೇಳಿದರು.
ಮಕ್ಕಳ ಸಾಮರ್ಥ್ಯಗಳ ವಿಕಸನದಲ್ಲಿ ಪೋಷಕರ ಪಾತ್ರ ವಿಷಯವಾಗಿ ಹೈದರಾಬಾದ್ ಐಐಟಿ ಪೂರ್ವ ಪ್ರಾಧ್ಯಾಪಕ
ಡಾ. ರವೀಂದ್ರ ಗುರುವಣ್ಣವರ ಮಾತನಾಡಿ, ಮಕ್ಕಳ ಸ್ವಾಭಾವಿಕ ಒಲವು, ಸಾಮರ್ಥ್ಯ ಕಂಡು ಹಿಡಿದು ಆ ದಿಕ್ಕಿನಲ್ಲಿ ಅವರು ಬೆಳೆಯುವ ಪರಿಸರ ನೀಡಬೇಕು. ಪ್ರತಿ ಮಗು ಅನನ್ಯವಾಗಿರುತ್ತದೆ. ಕಲಿಕೆಯಲ್ಲಿ ನಿಜವಾದ ಹಂಬಲ ಮೂಡಿಸಬೇಕು. ಆ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಕಲಿಕೆಯ ಹಂಬಲ ಮೂಡಿಸಬೇಕು.
ಮಕ್ಕಳಿಗೆ ಕಲಿಕೆ ಬಗ್ಗೆ ತಪ್ಪು ಸಂದೇಶ ರವಾನಿಸದಿರೋಣ. ಕಲಿಕೆ ದಾಹ ಮೂಡಿಸುವ ಸ್ಪೂರ್ತಿದಾಯಕ ವಾತಾವರಣ ನಿರ್ಮಾಣ ಮಾಡಬೇಕು. ಸೇವಾ ಮನೋಭಾವ ಬೆಳೆಸೋಣ. ವಿಶಾಲ ದೃಷ್ಟಿಕೋನ, ಆತ್ಮವಿಶ್ವಾಸ, ಸ್ವ ಸಾಮರ್ಥ್ಯ ಬೆಳವಣಿಗೆಯಾಗುತ್ತದೆ. ಸೇವೆಯಿಂದ ವೈಯಕ್ತಿಕ ಜೀವನದಲ್ಲಿ ಬೆಳವಣಿಗೆ ಸಾಧ್ಯ. ಅವರ ಸ್ವಾಭಾವಿಕ ಒಲವು ಯಾವ ಕಡೆ ಇದೆ ಎನ್ನುವುದನ್ನು ಅರಿಯಬೇಕು. ವಿವಿಧ ಆಯಾಮಗಳ ಬೌದ್ಧಿಕ ಸಾಮರ್ಥ್ಯ ಅರಿಯಬೇಕು. ಮಕ್ಕಳನ್ನು ಇನ್ನೊಬ್ಬರ ಜೊತೆಗೆ ಹೋಲಿಸಬಾರದು. ಪರೀಕ್ಷಾ ಅಂಕಗಳ ಬದಲಾಗಿ ವಿಷಯಗಳ ಕಲಿಕೆಯ ಕಡೆಗೆ ಗಮನ ಹರಿಸೋಣ ಎಂದು ಹೇಳಿದರು.