ಬೆಂಗಳೂರು:
ವಸಂತನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳಿಂದ ಆಯೋಜಿಸಿದ್ದ ‘ಪರಿಶಿಷ್ಟಸಮುದಾಯಗಳ ಸಹೋದರತ್ವ ಸಮಾವೇಶ’ದಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ‘ದಲಿತರು ಎಡ-ಬಲ ಎನ್ನುತ್ತಿದ್ದರೆ ಏನೂ ಆಗುವುದಿಲ್ಲ. ಒಗ್ಗಟ್ಟಿದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ನಾನು ಏಕೆ ಮುಖ್ಯಮಂತ್ರಿ ಆಗಬಾರದು? ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ ಏಕೆ ಮುಖ್ಯಮಂತ್ರಿ ಆಗಬಾರದು? ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಉನ್ನತ ಸಚಿವ ಸ್ಥಾನ ನಿರ್ವಹಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ಅವಕಾಶಗಳನ್ನು ತಪ್ಪಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿ
ಹೊಸ ಚರ್ಚೆಗೆ ದಾರಿ ಮಾಡಿ ಕೊಟ್ಟಿದ್ದಾರೆ.
ಸಚಿವ ಕೆಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ ಚಂದ್ರಪ್ಪ, ಪ್ರಚಾರ ಸಮಿತಿ ಸಹ ಅಧ್ಯಕ್ಷ ಎಚ್ ಪಿ ಸುಧಾಮ್ ದಾಸ್, ಕೆಪಿಸಿಸಿ ಉಪಾಧ್ಯಕ್ಷ ಬಿ ಗೋಪಾಲ್ ಮತ್ತಿತರರ ಉಪಸ್ಥಿತಿಯಲ್ಲಿ ಮಾತನಾಡಿದ ಜಿ ಪರಮೇಶ್ವರ್ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಮುಂಬರುವ ಅಧಿವೇಶನದಲ್ಲಿ ವರದಿ ಮಂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.