ಬೆಂಗಳೂರು:
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳಾಗಿದ್ದ ಐದು ಗ್ಯಾರಂಟಿ ಘೋಷಣೆಗಳು ದೊಡ್ಡ ಸದ್ದು ಮಾಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳ ಜಾರಿಗೆ ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೊದಲ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಮೊದಲ ಸಂಪುಟ ಸಭೆಯಲ್ಲೇ ಅದನ್ನು ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.ಆಯಾ ಇಲಾಖೆ ಸಚಿವರು ಒಟ್ಟಿಗೆ ಕುಳಿತು ಇದರ ಬಗ್ಗೆ ಚರ್ಚೆ ನಡೆಸಿ ಜಾರಿ ಮಾಡುತ್ತೇವೆ, ಆದರೆ ಗ್ಯಾರಂಟಿಗಳಿಗೆ ಷರತ್ತುಗಳು ಹಾಗೂ ಮಾನದಂಡಗಳು ಇರುತ್ತವೆ. ಗ್ಯಾರಂಟಿಗಳ ಜಾರಿ ಬಗ್ಗೆ ನೀತಿ-ನಿಯಮಗಳೇನು ಎಂಬುದನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಹೈಕಮಾಂಡ್ ಮಟ್ಟದಲ್ಲಿ ಈ ಕುರಿತಾಗಿ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬುದು ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗಿದ್ದೇವೆ. ಈಗ ಪಕ್ಷಕ್ಕೆ ಬಹುಮತ ದೊರಕಿದ್ದು ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರು ತೀರ್ಮಾನ ಮಾಡಲಿದೆ ಎಂದರು.
2013 ರಲ್ಲಿ ಪರಮೇಶ್ವರಗೆ ಆದ ಅನ್ಯಾಯವನ್ನು ಈ ಬಾರಿ ಅದನ್ನು ಹೈಕಮಾಂಡ್ ಸರಿ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುಮ್ಮನಿದ್ದೇನೆ ಎಂದರೆ ನಾನು ಅಸಮರ್ಥ ಎಂದು ಅರ್ಥವಲ್ಲ. ನಾನು ವರಿಷ್ಠರನ್ನ ನಂಬಿದ್ದೇನೆ. ನಾನು 50 ಶಾಸಕರ ಗುಂಪು ಕಟ್ಟಿಕೊಂಡು ದೆಹಲಿಗೆ ಹೋಗಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ಮಾಡುತ್ತೇನೆ. ಹೈಕಮಾಂಡ್ ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಗೊತ್ತಿದೆ. ಲಾಬಿ ಮಾಡಬಾರದು ಎಂದು ಸುಮ್ಮನೆ ಇದ್ದೇನೆ ಎಂದರು.