ಲಾಹೋರ್: ವಿಶ್ವ ಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ ಆಡದೆ ಇರಲು ಪಾಕಿಸ್ತಾನ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಐಸಿಸಿ ಟಿ20 ವಿಶ್ವಕಪ್ಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಫೆಬ್ರುವರಿ 15ರಂದು ಭಾರತದ ವಿರುದ್ಧ ನಡೆಯಲಿರುವ ಲೀಗ್ ಪಂದ್ಯವನ್ನು ಬಹಿಷ್ಕರಿಸಿರುವುದಾಗಿ ಮಾಹಿತಿ ಹಂಚಿಕೊಂಡಿದೆ.
ಭದ್ರತಾ ಕಾರಣಗಳಿಂದ ಬಾಂಗ್ಲಾದೇಶ ತಂಡ ಭಾರತದಲ್ಲಿ ಆಯೋಜನೆಗೊಂಡಿದ್ದ ತನ್ನ ಪಂದ್ಯಾವಳಿಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿತ್ತು. ಆದರೆ, ಬಾಂಗ್ಲಾ ತಂಡದ ಮನವಿಯನ್ನು ತಿರಸ್ಕರಿಸಿದ ಐಸಿಸಿ, ಬಾಂಗ್ಲಾ ಕ್ರಿಕೆಟ್ ತಂಡದ ಬದಲು ಸ್ಕಾಟ್ಲಂಡ್ ತಂಡಕ್ಕೆ ಟೂರ್ನಿಯಲ್ಲಿ ಆಡುವ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಾಕಿಸ್ತಾನ ಸರ್ಕಾರ, ‘ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ವಿಶ್ವಕಪ್ ಟಿ20 2026 ರಲ್ಲಿ ಭಾಗವಹಿಸಲು ಅನುಮೋದನೆ ನೀಡಲಾಗಿದೆ. ಆದರೆ ಫೆಬ್ರವರಿ 15ರಂದು ಭಾರತದ ವಿರುದ್ಧ ನಿಗದಿಯಾಗಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೈದಾನಕ್ಕೆ ಇಳಿಯುವುದಿಲ್ಲ’ ಎಂದು ತಿಳಿಸಿದೆ.


