ಲಾಹೋರ್ : ಪಾಕಿಸ್ತಾನದ ಲಾಹೋರಿನ ಶಾದ್ಮನ್ ಚೌಕಕ್ಕೆ ಮರುನಾಮಕರಣ ಮಾಡಿ ಅಲ್ಲಿ ಭಗತ್ ಸಿಂಗ್ ಪ್ರತಿಮೆ ನಿರ್ಮಿಸುವ ಪಾಕಿಸ್ತಾನದ ಯೋಜನೆಯನ್ನು ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಅಭಿಪ್ರಾಯದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯ ಜಿಲ್ಲಾಡಳಿತವು ಲಾಹೋರ್ ಹೈಕೋರ್ಟ್ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಸಹಾಯಕ ಅಡ್ವೊಕೇಟ್ ಜನರಲ್ ಅಸ್ಗರ್ ಲೆಘರಿ ಅವರು ಶುಕ್ರವಾರ ಲಾಹೋರ್ ಹೈಕೋರ್ಟ್ಗೆ (ಎಲ್ಎಚ್ಸಿ) ನೀಡಿದ ಲಿಖಿತ ಹೇಳಿಕೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ ಮತ್ತು ಅವರನ್ನು “ಭಯೋತ್ಪಾದಕ” ಎಂದು ಹೆಸರಿಸಲಾಗಿದೆ ಎಂದು ತಿಳಿಸಿದ್ದಾರೆ.
“ಶಾದ್ಮನ್ ಚೌಕಕ್ಕೆ ಭಗತ್ ಸಿಂಗ್ ಹೆಸರಿಡಲು ಮತ್ತು ಅಲ್ಲಿ ಅವರ ಪ್ರತಿಮೆಯನ್ನು ಇರಿಸಲು ಲಾಹೋರ್ ಜಿಲ್ಲಾಡಳಿತದ ಉದ್ದೇಶಿತ ಯೋಜನೆಯನ್ನು ಕಮೋಡೋರ್ (ನಿವೃತ್ತ) ತಾರಿಕ್ ಮಜೀದ್ ಅವರು ನೀಡಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ” ಎಂದು ಲಾಹೋರ್ನ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಹೇಳಿದೆ.
ಪಾಕಿಸ್ತಾನದ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಅವರು ಲಾಹೋರ್ ಹೈಕೋರ್ಟಿಗೆ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೋರ್ಟಿಗೆ ಭಗತ್ ಸಿಂಗ್ ಅವರು ಭಯೋತ್ಪಾದಕ ಎಂದು ಕಮೋಡೋರ್ (ನಿವೃತ್ತ) ತಾರಿಕ್ ಮಜೀದ್ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದನ್ನು ತಿಳಿಸಲಾಗಿದೆ.
ಭಗತ್ ಸಿಂಗ್ ಶಾದ್ಮನ್ ಚೌಕ ಎಂದು ಮರುನಾಮಕರಣ ಮಾಡುವ ಸಮಿತಿಗೆ ಸರ್ಕಾರದಿಂದ ನೇಮಕಗೊಂಡ ತಾರಿಕ್ ಮಜೀದ್ ತಮ್ಮ ಅವಲೋಕನಗಳಲ್ಲಿ, ಭಗತ್ ಸಿಂಗ್ “ಕ್ರಾಂತಿಕಾರಿ ಅಲ್ಲ, ಆತ ಅಪರಾಧಿ, ಇಂದಿನ ಪರಿಭಾಷೆಯಲ್ಲಿ ಭಯೋತ್ಪಾದಕ, ಅವರು ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಕೊಂದರು ಮತ್ತು ಈ ಅಪರಾಧಕ್ಕಾಗಿ ಅವರನ್ನು ಅವರ ಇಬ್ಬರು ಸಹಚರರೊಂದಿಗೆ ಗಲ್ಲಿಗೇರಿಸಲಾಯಿತು ಎಂದು ಹೇಳಿದ್ದಾರೆ.
ಶಾದ್ಮನ್ ಚೌಕಕ್ಕೆ ಭಗತ್ ಸಿಂಗ್ ಹೆಸರಿಡಬಾರದು ಮತ್ತು ಅಲ್ಲಿ ಅವರ ಪ್ರತಿಮೆ ಇಡಬಾರದು ಎಂದು ಮಜೀದ್ ಅಧಿಕಾರಿಗಳಿಗೆ ಸೂಚಿಸಿದರು. ವರದಿಯ ಪ್ರಕಾರ, “ಭಗತ್ ಸಿಂಗ್ ಇಸ್ಲಾಮಿಗೆ ವಿರುದ್ಧವಾಗಿದ್ದರು, ನಾಸ್ತಿಕರಾಗಿದ್ದರು. ಮತ್ತು ಪಾಕಿಸ್ತಾನದ ಭಗತ್ ಸಿಂಗ್ ಫೌಂಡೇಶನ್ ಇಸ್ಲಾಮಿಕ್ ಸಿದ್ಧಾಂತ ಮತ್ತು ಪಾಕಿಸ್ತಾನಿ ಸಂಸ್ಕೃತಿಯ ವಿರುದ್ಧ ಕೆಲಸ ಮಾಡುತ್ತಿದೆ, (ಮತ್ತು) ಅದನ್ನು ನಿಷೇಧಿಸಬೇಕು ಎಂದು ತಾರಿಕ್ ಮಜೀದ್ ಹೇಳಿದ್ದಾರೆ. “ಪಾಕಿಸ್ತಾನದಲ್ಲಿ ನಾಸ್ತಿಕನ ಹೆಸರನ್ನು ಇಡುವುದು ಸ್ವೀಕಾರಾರ್ಹವಲ್ಲ ಮತ್ತು ಇಸ್ಲಾಂ ಮಾನವ ಪ್ರತಿಮೆಗಳನ್ನು ನಿಷೇಧಿಸುತ್ತದೆ ಎಂಬುದು ತಮ್ಮನ್ನು ತಾವು ಮುಸ್ಲಿಮರು ಎಂದು ಕರೆದುಕೊಳ್ಳುವ ಪ್ರತಿಷ್ಠಾನದ ಅಧಿಕಾರಿಗಳಿಗೆ ತಿಳಿದಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಆರೋಪಕ್ಕೆ ಭಾನುವಾರ ಪ್ರತಿಕ್ರಿಯಿಸಿದ ಪಾಕಿಸ್ತಾನದ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಅವರು, ಭಗತ್ ಸಿಂಗ್ ಪ್ರಶ್ನಾತೀತವಾಗಿ ಮಹಾನ್ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹುತಾತ್ಮರಾಗಿದ್ದಾರೆ. ಭಗತ್ ಸಿಂಗ್ ಪ್ರತಿಷ್ಠಾನದ ವಿರುದ್ಧ ಗಂಭೀರ ಆರೋಪ ಮಾಡಿದ್ದಕ್ಕಾಗಿ ನಿವೃತ್ತ ಕಮೋಡೋರ್ ಮಜೀದ್ ಅವರಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಮತ್ತು ಭಗತ್ ಸಿಂಗ್ ಬಗ್ಗೆ ಅವರ ತಾಳಿದ ನಿಲುವನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಖುರೇಷಿ ಅವರು ವಕೀಲ ಖಾಲಿದ್ ಜಮಾನ್ ಖಾನ್ ಕಾಕರ್ ಮೂಲಕ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಜಿಲ್ಲಾಡಳಿತ, ಲಾಹೋರ ಜಿಲ್ಲಾಧಿಕಾರಿ, ಪಂಜಾಬ್ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಕೆಲವರನ್ನು ಕಕ್ಷಿದಾರರನ್ನಾಗಿ ಹೆಸರಿಸಿದ್ದಾರೆ.