ನವದೆಹಲಿ: ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಸದೆಬಡಿಯಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧದ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಶನಿವಾರ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕ್ ಮತ್ತೆ ದಾಳಿ ಆರಂಭಿಸಿದೆ.
ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಪರಸ್ಪರ ಮಾತುಕತೆ ನಡೆಸಿ, ಶನಿವಾರ ಸಂಜೆಯಿಂದಲೇ ಸಂಘರ್ಷ ಕೊನೆಗಾಣಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಗಡಿಪ್ರದೇಶಗಳಲ್ಲಿ ಡೋನ್ ದಾಳಿಗೆ ಪಾಕ್ ಯತ್ನ ನಡೆಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ನಿರಂತರವಾಗಿ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸಶಸ್ತ್ರ ಪಡೆಯು ಶುಕ್ರವಾರ ರಾತ್ರಿ ಹಾಗೂ ಶನಿವಾರ ತೀಕ್ಷ್ಯ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಎಂಟು ಮಿಲಿಟರಿ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಭಾರಿ ಹಾನಿ ಉಂಟು ಮಾಡಿದೆ. ಅದರ ಬೆನ್ನಲ್ಲೇ, ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರಿಗೆ ಮಧ್ಯಾಹ್ನ 3:30ಕ್ಕೆ ಕರೆ ಮಾಡಿ ಮಾತುಕತೆ ನಡೆಸಿದರು.