ನವದೆಹಲಿ : ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಹತ್ಯೆಯಾದ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದೆ. ಅದಿ ಪ್ರತಿಯಾಗಿ ಪಾಕಿಸ್ತಾನವು ಕ್ರಮ ಕೈಗೊಂಡಿದೆ. ಪಾಕಿಸ್ತಾನವು ತನ್ನ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳ ಸಂಚಾರವನ್ನು ಮುಚ್ಚಿದ್ದು, ಈಗ ಭಾರತವು ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು (Airspace) ಮುಚ್ಚಿದೆ.
ಕಳೆದ ವಾರ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನ ಸಂಚಾರಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು. ಇದೀಗ ಭಾರತವು ಪಾಕಿಸ್ತಾನದ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇದು ಏಪ್ರಿಲ್ 30ರಿಂದ 2025ರ ಮೇ 23ರವರೆಗೆ ಜಾರಿಯಲ್ಲಿರಲಿದೆ.
ಈ ಮೂಲಕ ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ರಾತ್ರಿ 11:59ರವರೆಗೆ ತಮ್ಮ ವಾಯುಪ್ರದೇಶದಲ್ಲಿ ಪರಸ್ಪರ ವಿಮಾನಯಾನ ಸಂಸ್ಥೆಗಳನ್ನು ನಿರ್ಬಂಧಿಸಿವೆ. ʼʼಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದಲ್ಲಿ ಪ್ರವೇಶವಿಲ್ಲʼʼ ಎಂದು ಭಾರತ ನೋಟಿಸ್ ಟು ಏರ್ಮನ್ (NOTAM) ಹೊರಡಿಸಿದೆ.
ಈ ನಡೆಯಿಂದ ಎರಡೂ ದೇಶಗಳ ವಿಮಾನಗಳು ಸುತ್ತು ಬಳಸಿ ವಿವಿಧ ದೇಶಗಳಿಗೆ ತೆರಳಬೇಕಿದ್ದು, ಪ್ರಯಾಣದ ಸಮಯವನ್ನು ಹೆಚ್ಚಿಸಲಿದೆ. ಜತೆಗೆ ವಿಮಾನ ಸಂಸ್ಥೆಗಳ ವೆಚ್ಚ ಹೆಚ್ಚಾಗಲಿದೆ. ಇದಕ್ಕೂ ಮೊದಲು ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದು, ತಾತ್ಕಾಲಿಕ ವೀಸಾ ಹೊಂದಿರುವ ಪಾಕಿಸ್ತಾನದ ಪ್ರಜೆಗಳು ಭಾರತ ಬಿಟ್ಟು ತೆರಳುವಂತೆ ಆದೇಶಿಸಿತ್ತು.