ದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ಸೇನೆಯಲ್ಲಿರುವ ಸಿಖ್ ಸೈನಿಕರಿಗೆ ಹೇಳಿದ್ದಾನೆ. ಪಾಕಿಸ್ತಾನ ಸಿಖ್ಖರಿಗೆ ಮತ್ತು ಖಲಿಸ್ತಾನಕ್ಕೆ “ಸ್ನೇಹಪರ” ಎಂದು ಹೇಳಿದ್ದಾನೆ.
ಮತ್ತೊಂದು ಪ್ರಚೋದನಕಾರಿ ವೀಡಿಯೊದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಗೆ “ಅಂತಿಮ ಯುದ್ಧ”ವಾಗಲಿದೆ ಎಂದು ಪನ್ನುನ್ ಹೇಳಿದ್ದಾನೆ. “ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಮೋದಿಗೆ ಅಂತಿಮ ಯುದ್ಧವಾಗಿರುತ್ತದೆ. ಭಾರತದ ಕಡೆಯ ಪಂಜಾಬಿಗಳು ಪಾಕಿಸ್ತಾನಿ ಸೈನ್ಯಕ್ಕೆ ಲಂಗಾರ್ ಆಗಿ ಸೇವೆ ಸಲ್ಲಿಸುತ್ತಾರೆ” ಎಂದು ಪನ್ನು ವೀಡಿಯೊ ಸಂದೇಶದಲ್ಲಿ ಹೇಳಿದ್ದಾನೆ ಎಂದು ಡಾನ್ ವರದಿ ಮಾಡಿದೆ.
ಭಾರತೀಯ ಸೇನೆಯಲ್ಲಿ ವಿಭಜನೆಯನ್ನು ಸೃಷ್ಟಿಸುವ ಗುರಿ ಹೊಂದಿರುವ ಈತ ಸಿಖ್ ಸೈನಿಕರಿಗೆ ಸಂದೇಶವನ್ನು ಕಳುಹಿಸುತ್ತಾ, ಪಾಕಿಸ್ತಾನವು ನಮ್ಮ ಶತ್ರುವಲ್ಲ ಏಕೆಂದರೆ ಭಾರತದಿಂದ ಪಂಜಾಬ್ “ವಿಮೋಚನೆ” ಪಡೆದ ನಂತರ ಅದು “ನೆರೆಯ ರಾಷ್ಟ್ರ” ಆಗುತ್ತದೆ ಎಂದು ಹೇಳಿದ್ದಾನೆ.
“ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ. ಪಾಕಿಸ್ತಾನ ನಿಮ್ಮ ಶತ್ರುವಲ್ಲ. ಪಾಕಿಸ್ತಾನ ಸಿಖ್ ಜನರಿಗೆ ಮತ್ತು ಖಲಿಸ್ತಾನಕ್ಕೆ ಸ್ನೇಹಪರ ದೇಶವಾಗಿದೆ ಮತ್ತು ಇರುತ್ತದೆ. ನಾವು ಪಂಜಾಬ್ ಅನ್ನು ಸ್ವತಂತ್ರಗೊಳಿಸಿದ ನಂತರ, ಪಾಕಿಸ್ತಾನ ನಮ್ಮ ನೆರೆಯ ದೇಶವಾಗುತ್ತದೆ. ನಿಮ್ಮ ಶತ್ರು ಭಾರತೀಯ ಸೇನೆ” ಎಂದು ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆಯ ಪನ್ನುನ್ ಹೇಳಿದ್ದಾನೆ.
ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ನೇಪಾಳಿ ಪ್ರಜೆ ಸೇರಿದಂತೆ 26 ಜನರನ್ನು ಕೊಂದರು, ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಜಾಗತಿಕ ಖಂಡನೆಗೆ ಗುರಿಯಾಯಿತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಆರಂಭದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು; ಆದಾಗ್ಯೂ, ಭಾರತ ತನ್ನ ಪ್ರತೀಕಾರದ ಸಿದ್ಧತೆಗಳನ್ನು ಹೆಚ್ಚಿಸುತ್ತಿದ್ದಂತೆ, ಸಂಘಟನೆಯು ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ನಂತರ ಹೇಳಿಕೊಂಡಿತು.
ಪಹಲ್ಗಾಮ್ ದಾಳಿ | ಭಾರತದ ಸಿಖ್ ಸೈನಿಕರಿಗೆ ಪ್ರಚೋದನಾಕಾರಿ ಕರೆ ನೀಡಿದ ಭಯೋತ್ಪಾದಕ ಗುರುಪತ್ವಂತ್ ಪನ್ನುನ್
