ಬೆಂಗಳೂರು :
ಬಿಜೆಪಿ ಮುಖಂಡ ಪದ್ಮರಾಜ್ ಅವರು ತಮ್ಮ ಬೆಂಬಲಿಗರ ಜತೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಶಾಸಕ ಭೈರತಿ ಸುರೇಶ್, ಮಾಜಿ ಮೇಯರ್ ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.
*ಪದ್ಮರಾಜ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು*
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ, ಅವರ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಪರಿಣಾಮ ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮೊದಲಿಗೆ ರಾಜಾಜಿನಗರ ಕ್ಷೇತ್ರದಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಆರಂಭಿಸುತ್ತಿದ್ದೇನೆ.
2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಮೋದಿ ಅವರು ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಸ್ಕರಿಸಿ ಮತ ಹಾಕಿ ಎಂಬ ಸಂದೇಶ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅವರ ಮಾತಿನಂತೆ ನಾವು ನಮ್ಮ ಪಕ್ಷದ ಚುನಾವಣೆ ಪ್ರಚಾರ ಆರಂಭಿಸುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಲು ತೀರ್ಮಾನಿಸಿದ್ದೇವೆ. ಇದೇ ಪದ್ಧತಿಯನ್ನು ಬ್ಲಾಕ್ ಹಾಗೂ ಬೂತ್ ಮಟ್ಟದ ನಾಯಕರೂ ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ. ಮತದಾರರು ಮತದಾನ ಮಾಡುವ ಮುನ್ನ ಇದೇ ರೀತಿ ನಮಿಸಿ ಮತದಾನ ಮಾಡಲಿ ಎಂದು ಹೇಳಿದರು.
ಇಂದು ಬಿಜೆಪಿಯಿಂದ ಪದ್ಮರಾಜ್, ಉಮೇಶ್ ಸೇರಿದಂತೆ ಸುಮಾರು 450 ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ಸೇರುತ್ತಿದ್ದಾರೆ. ಈ ಎಲ್ಲರನ್ನು ಪಕ್ಷದ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಕ್ಷೇತ್ರ ನನಗೆ ಬಹಳ ಹತ್ತಿರವಾಗಿದೆ. ನಾನು ಓದಿದ ಕಾಲೇಜು ಇದೇ ಕ್ಷೇತ್ರದಲ್ಲಿದೆ. ಈ ಕ್ಷೇತ್ರದಲ್ಲಿ ನಾನು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದೆ. ಇಂದು ಬಿಜೆಪಿಯಿಂದ ಹಾಗೂ ಜೆಡಿಎಸ್ ಕಾಂಗ್ರೆಸ್ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ನಾನು ಹೆಸರು ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ಮಾಧ್ಯಮಗಳಲ್ಲಿ ಕೆಲವರ ಹೆಸರನ್ನು ಹೇಳಿ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿ ಸೃಷ್ಟಿ ಮಾಡಲಾಗುತ್ತಿದೆ. ನೀವು ಯಾವುದೇ ಸುದ್ದಿ ಸೃಷ್ಟಿ ಮಾಡಬೇಡಿ. ಸಮಯ ಬಂದಾಗ ನಾನೇ ನಿಮಗೆ ಎಲ್ಲವನ್ನೂ ತಿಳಿಸುವೆ ಎಂದು ಹೇಳಿದರು.