ಬೆಂಗಳೂರು:
“ನಾನು ಆಪರೇಷನ್ ಹಸ್ತ, ಆಪರೇಷನ್ ಕಮಲ ಎರಡರ ವಿರೋಧಿ. ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಮುಂದಾಗುವುದಿಲ್ಲ. ನಮ್ಮದೇನಿದ್ದರು ಕೋ-ಆಪರೇಷನ್” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು ಶುಕ್ರವಾರ, ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
“ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ದಾಂತ, ಭಾರತ್ ಜೋಡೊ ಬಗ್ಗೆ ಯಾರಿಗೆ ಒಲವಿದೆ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ” ಎಂದರು.
ಹಾಲಿ- ಮಾಜಿಗಳನ್ನ ಯಾವಾಗ ತಬ್ಬಿಕೊಳ್ಳುವಿರಿ ಎಂಬ ಮರುಪ್ರಶ್ನೆಗೆ ಉತ್ತರಿಸುತ್ತಾ “ಎಷ್ಟು ಜನ ಸೇರಲಿದ್ದಾರೆ ಎನ್ನುವ ಪಟ್ಟಿ ಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆ ಮುಹೂರ್ತ, ಲಗ್ನ ಕೂಡಿಬಂದಾಗ ನಡೆಯಲಿದೆ” ಎಂದು ತಿಳಿಸಿದರು.
“ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ ನಾವು ಯಾರನ್ನು ಕರೆಯುವುದಿಲ್ಲ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಷಿಂಗ್ ಮೆಷಿನ್ ಸೇರಿಕೊಂಡು ಬಿಡಲಿಲ್ಲವೇ” ಎಂದು ತಿಳಿಸಿದರು.
*ರಾಜ್ಯದ ರೈತರ ಹಿತ ಮುಖ್ಯ*
ಕಾವೇರಿ ನೀರನ್ನು ನಿಲ್ಲಿಸಲಾಗಿದೆಯೇ ಎನ್ನುವ ಪ್ರಶ್ನೆಗೆ “ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜೊತೆಗೆ ನಮ್ಮ ರೈತರ ಹಿತ ಕಾಯುವುದು ಮುಖ್ಯ, ಅದಕ್ಕೆ ನಾವು ಬದ್ಧ.
ನೀರು ಬಿಡುಗಡೆ ಮಾಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ, ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರು ನಮ್ಮ ಆದ್ಯತೆ” ಎಂದು ಹೇಳಿದರು.
ನಿಗಧಿ ಮಾಡಿದಷ್ಟು ನೀರು ಬಿಡುಗಡೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ “ಬಿಡುಗಡೆ ಮಾಡಲು ನೀರೇ ಇಲ್ಲ” ಎಂದು ಪ್ರತಿಕ್ರಿಯೆ ನೀಡಿದರು.
*ಮೇಕೆದಾಟು ಮತ್ತು ಮಹದಾಯಿಗೆ ಒಪ್ಪಿಗೆ ಕೊಡಿಸಲಿ*
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನವಿರೋಧಿ ಸರ್ಕಾರ ಎಂದು ಪ್ರತಿಭಟನೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ “ಮೊದಲು ಮೇಕೆದಾಟು ಮತ್ತು ಮಹದಾಯಿಗೆ ಬಿಜೆಪಿಯವರು ಕೇಂದ್ರದಿಂದ ಒಪ್ಪಿಗೆ ಕೊಡಿಸಲಿ” ಎಂದು ಸವಾಲು ಹಾಕಿದರು.
“ಜನವಿರೋಧಿ ಎಂದರೆ ಏನು? ಜನ ಬಿಜೆಪಿಯವರನ್ನು ವಿರೋಧಿಸಿಯೇ ಮನೆಯಲ್ಲಿ ಕೂರಿಸಿದ್ದಾರೆ. ನಂತರ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಷ್ಟು ಅರ್ಹತೆ ಇಲ್ಲ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ ಅಲ್ಲಿ ಓಡಾಡುತ್ತಿರುವುದು, 2 ಸಾವಿರ ಖಾತೆಗೆ ಬರುತ್ತಿರುವುದು ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಅವರ ಹೊಟ್ಟೆಯನ್ನು ಉರಿಸುತ್ತಿದೆ.
ಯಡಿಯೂರಪ್ಪ ಅವರು ತಮ್ಮ ರಾಜಕೀಯ ಉಳಿವಿಗಾಗಿ ಮಾಡುತ್ತಿದ್ದಾರೆ ಮಾಡಲಿ. ಪ್ರತಿಭಟನೆಗಳು ಇರಬೇಕು ಆಗ ನಾವು ನಮ್ಮ ಶಾಸಕರು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ನಮಗೂ ಹುಮ್ಮಸ್ಸು ಬರುತ್ತದೆ. 100 ದಿನಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಸರ್ಕಾರ ಭಾರತದಲ್ಲೇ ಇಲ್ಲ. ಯಾರೋ 100 ದಿನಗಳಲ್ಲಿ 15 ಲಕ್ಷ ಹಣ ಕೊಡುತ್ತೇನೆ ಎಂದಿದ್ದರು? ಅವರ ಪ್ರಣಾಳಿಕೆಯ ಬಗ್ಗೆ ಮೊದಲು ಯೋಚಿಸಲಿ” ತಿರುಗೇಟು ನೀಡಿದರು..
*ಜೆಡಿಎಸ್- ಬಿಜೆಪಿ ಹೊಂದಾಣಿಕೆಗೆ ಆಲ್ ದಿ ಬೆಸ್ಟ್*
ದೇವೇಗೌಡರು ಹಾಗೂ ಅಮಿತ್ ಷಾ ಭೇಟಿಯಾಗಿ ಹೊಂದಾಣಿಕೆಯ ಮಾತುಗಳನ್ನಾಡಿದ್ದಾರೆ ಎನ್ನುವ ಪ್ರಶ್ನೆಗೆ “ಇದೇನು ಹೊಸ ವಿಚಾರವೇನಲ್ಲ, ಅವರ ಪಕ್ಷದ ಬಗ್ಗೆ ನಾನ್ಯಾಕೆ ಮಾತನಾಡಲಿ, ಒಂದಾಗಲಿ ಬಿಡಿ. ಅವರಿಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್” ಎಂದರು.
“ಕುಮಾರಸ್ವಾಮಿ ಹಾಗೂ ಆಶೋಕ್ ಅವರು ಒಂದಾಗಿದ್ದರು, ಈಗ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಅವರು ಒಂದಾಗುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಯಾರೇ ಒಂದಾದರೂ ನಮಗೆ ಸಂತೋಷ” ಎಂದು ಹೇಳಿದರು.
“ಅವರವರ ಉಳಿವಿಗಾಗಿ, ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡಲಿ. ಆದರೆ ಅವರುಗಳ ಸಿದ್ಧಾಂತ ಏನಾಗುತ್ತದೆ ಎಂಬುದು ಕುತೂಹಲ” ಎಂದರು.
“ಹಿರಿಯರಾದ ದೇವೆಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ ಎಂದಿದ್ದರು. ಒಂದು ಸಿದ್ದಾಂತ ಇಟ್ಟುಕೊಂಡು ಪಕ್ಷ ಕಟ್ಟಿರುತ್ತಾರೆ, ಈಗ ಆ ಪಕ್ಷ ಉಳಿಯುತ್ತದೊ ಏನಾಗುತ್ತದೊ ಗೊತ್ತಿಲ್ಲ? ಹಾಲಿ ಶಾಸಕರು, ಮಾಜಿ ಶಾಸಕರು ಏನಾಗುತ್ತಾರೊ ಅದರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಹೇಳಿದರು.
*ರಾಮನಗರ ಬಂದ್ ರಾಜಕೀಯ ಪ್ರೇರಿತ*
“ಮೆಡಿಕಲ್ ಕಾಲೇಜು ವಿಚಾರವಾಗಿ ನಡೆದ ಬಂದ್ ಮತ್ತು ಪ್ರತಿಭಟನೆ ರಾಜಕೀಯ ಪ್ರೇರಿತ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ನೀಡಿದ್ದರು. ಅದರ ಟೆಂಡರ್ ಕೂಡ ರದ್ದಾಗಿಲ್ಲ. ಅಷ್ಟರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಮತ್ತೊಂದು ಮೆಡಿಕಲ್ ಕಾಲೇಜು ನೀಡಿತು” ಎಂದರು.
“ಈಗ ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಹಾಗೂ ಮೆಡಿಕಲ್ ಕಾಲೇಜು ಎರಡೂ ಆಗುತ್ತಿದೆ. ಒಂದೇ ಜಿಲ್ಲೆಯಲ್ಲಿ ಎರಡು ಇರಬಾರದು ಎಂದು ನಿಯಮ ಇಲ್ಲವಲ್ಲ” ಎಂದು ಕೇಳಿದರು.
*ಅಜೀಂ ಪ್ರೇಮ್ಜೀ ಈ ದೇಶದ ಆಸ್ತಿ*
“ಅಜೀಂ ಪ್ರೇಮ್ಜೀ ಅವರು ಪ್ರತಿ ವರ್ಷ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಜನಕಲ್ಯಾಣಕ್ಕೆ ಬಳಸುತ್ತಿದ್ದಾರೆ. ಅವರು ಈ ದೇಶದ ಆಸ್ತಿ, ಅವರಿಗೆ ಸರ್ಕಾರದಿಂದ ಬೇಕಾದ ಸಹಕಾರ ಮತ್ತು ಸವಲತ್ತು ನೀಡುವುದು ನಮ್ಮ ಕರ್ತವ್ಯ.
ಈಗಾಗಲೇ ಸರ್ಕಾರಿ ಶಿಕ್ಷಕರಿಗೆ ಉನ್ನತ ತರಬೇತಿ ನೀಡುತ್ತಿದ್ದಾರೆ, ಸಿಎಸ್ಆರ್ ಅನುದಾನವನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಬಳಸುತ್ತಿದ್ದಾರೆ. ಶಿಕ್ಷಕರ ಕೊರತೆಯನ್ನು ತುಂಬಲು ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿರುವ ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ. ರಾಜ್ಯದ ಹಿತದೃಷ್ಟಿಯಿಂದ ನಡೆದ ಭೇಟಿ” ಎಂದು ತಿಳಿಸಿದರು.
ಕಿಡಿ ಕಾರಿದ ಶೆಟ್ಟಿ :
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಇದೀಗ ಕಾಂಗ್ರೆಸ್ ಸೇರುವ ಹಾದಿಯಲ್ಲಿದ್ದಾರೆ. ದೊಡ್ಡ ಕಾರ್ಯಕ್ರಮ ನಡೆಸಿ ರಾಜ್ಯದ ಆಡಳಿತರೂಢ ಪಕ್ಷವನ್ನು ಸೇರುವುದಾಗಿ ಅವರು ಘೋಷಿಸಿದ್ದಾರೆ.
ಬಿಜೆಪಿಯಲ್ಲಿ ಬೆಳೆಯುವ ನಾಯಕರಿಗೆ ಅವಕಾಶ ಇಲ್ಲ, ಭವಿಷ್ಯದಲ್ಲಿ ಆ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಅವರು ಕಾಂಗ್ರೆಸ್ ಸೇರುವ ಸುಳಿವು ರವಾನಿಸಿದ್ದಾರೆ.

 
             
         
         
        
 
  
        
 
    