ಚುನಾವಣಾ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಎಂದೆನಿಸಿಕೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಸೌಲಭ್ಯಗಳ ಹಂಚಿಕೆ ಮಾತ್ರ ಮರೀಚಿಕೆಯಾಗಿದೆ. ದೊಡ್ಡ ದೊಡ್ಡ ಯೋಜನೆಗಳು ಇತರ ನಗರಗಳ ಪಾಲಾಗುತ್ತಿದೆ. ನರೇಂದ್ರ ಮೋದಿ ಸರಕಾರ ಬೆಳಗಾವಿಗೆ ಏನು ಮಾಡಿಲ್ಲ ಎಂಬ ಕೊರಗೂ ಇಲ್ಲಿನ ಜನತೆಯನ್ನು ಕಾಡುತ್ತಿದೆ. ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನೆಗೊಂಡರೂ ಆ ಪಕ್ಷ ಬೆಳಗಾವಿಗೆ ನೀಡಿರುವ ಕೊಡುಗೆ ಶೂನ್ಯ ಎಂಬ ಭಾವ ಜನತೆಯಲ್ಲಿ ಮೂಡಿದೆ. ಇನ್ನೊಂದೆಡೆ ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಹಾಗೂ ಸ್ವಚ್ಛ ರಾಜಕಾರಣಕ್ಕೆ ಹೆಸರಾಗಿರುವ ಆಮ್ ಆದ್ಮಿ ಪಕ್ಷ ಮೋದಿ ಬೆಳಗಾವಿ ಭೇಟಿಯನ್ನು ಕಟುವಾಗಿ ಖಂಡಿಸಿವೆ.
ಬೆಳಗಾವಿ : ನಹೀ ಖಾವೂಂಗಾ, ನ ಖಾನೆ ದೂಂಗಾ… ಎನ್ನುವ ಪ್ರಧಾನಿ ನರೇಂದ್ರ ಮೋದಿ ಮೊದಲು ತನ್ನ ಪಕ್ಷದ ಭ್ರಷ್ಟ ಬೆಳಗಾವಿ ಶಾಸಕರ ಮೇಲೆ ಕ್ರಮಕೈಗೊಳ್ಳಲಿ…!!
ಹೀಗೆಂದು ಆಮ್ ಆದ್ಮಿ ಪಾರ್ಟಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದೆ.
ಸೋಮವಾರ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟ್ ಮೂಲಕ AAP ಕಟುಕಿದೆ.
ಆಪ್ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಟ್ವೀಟ್ ಮಾಡುವ ಮೂಲಕ ಬಿಜೆಪಿ ಪಕ್ಷಕ್ಕೆ ತಿವಿದಿದ್ದಾರೆ. ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಸುಜೀತ ಮುಳಗುಂದ ಅವರ ಹೋರಾಟಕ್ಕೆ ಸಂಬಂಧಿಸಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಪಕ್ಷ ಮುಂದಾಗಿಲ್ಲ. ಬದಲಾಗಿ ಕರ್ನಾಟಕ ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ಒಳಗಾದ ಶಾಸಕನನ್ನು ಕಾನೂನಾತ್ಮಕವಾಗಿ ಶಿಕ್ಷೆಗೊಳಪಡಿಸಲು ಸಂರಕ್ಷಣೆ ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದು ಟ್ವೀಟ್ ನಲ್ಲಿ ಆರೋಪಿಸಲಾಗಿದೆ.
ಭ್ರಷ್ಟಾಚಾರದ ವಿಷಯದಲ್ಲಿ ನೀವು ನುಡಿದಂತೆ ನಡೆಯುವಿರೋ (will you walk the talk) ಎಂದು ಪ್ರಧಾನಿಗೆ ತರಾಟೆ ತೆಗೆದುಕೊಂಡಿದ್ದಾರೆ.
*ಬೆಳಗಾವಿಗೆ ನರೇಂದ್ರ ಮೋದಿ ಪ್ರಶ್ನೆಗಳ ಸುರಿಮಳೆ ಸುರಿಸಿದ ಕಾಂಗ್ರೆಸ್ !:* ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ಮೂಲಕ ಅವರು ಮುಂದಿನ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸುತ್ತಿದ್ದಾರೆ.
ಇತ್ತ ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ನರೇಂದ್ರ ಮೋದಿ ಅವರ ಬೆಳಗಾವಿ ಭೇಟಿಯನ್ನು ಕಟುವಾಗಿ ಟೀಕಿಸಿದೆ. ಪ್ರಧಾನಿ ಬೆಳಗಾವಿ ಭೇಟಿ ನೀಡುತ್ತಿರುವ ಸಂದರ್ಭವನ್ನು ಟೀಕಿಸಿದೆ. ಶಿಕ್ಷಣ ಇಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದಾದರೆ ಹೇಗೆ ? ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬಿಜೆಪಿಯವರಿಗೆ ಚುನಾವಣೆ ಪ್ರಚಾರ ಮುಖ್ಯವೇ ? ವಿದ್ಯಾರ್ಥಿಗಳ ಭವಿಷ್ಯದ ಅರಿವಿಲ್ಲವೇ ? ಈ ಬಗ್ಗೆ ಸ್ಪಷ್ಟಪಡಿಸಿ ಎಂದು ಟ್ವಿಟ್ ಮೂಲಕ ಬಿಜೆಪಿ ಮೇಲೆ ಟೀಕಾ ಪ್ರಹಾರ ನಡೆಸಿದೆ.
ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ?, ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನು ಖಾಲಿ ಕುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆ ಧರಿಸಬಾರದು ಎಂದಿರುವುದೇಕೆ?, ವಿದ್ಯಾರ್ಥಿಗಳನ್ನು ಗುರುತು ಸಿಕ್ಕರೆ ಸರ್ಕಾರದ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ? ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರಧಾನಿ ಹೇಳುವುದು ‘ಪರೀಕ್ಷಾ ಪೇ ಚರ್ಚಾ’ ಮಾಡುವುದು ‘ಪರೀಕ್ಷಾ ಮೇ ಆಕ್ರಮಣ್’ ಪ್ರಧಾನಿಯ ರೋಡ್ ಶೋಗಾಗಿ ಪ್ರಥಮ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಿದ ಬಿಜೆಪಿ ಸರ್ಕಾರ, ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದುದಾದರೂ ಹೇಗೆ, ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆಯನ್ನೇ ಮುಂದೂಡಿದೆ. ಪ್ರಧಾನಿಯ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೊಡುವುದು ನಾಚಿಕೆಗೇಡು’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಥಮ ಪರೀಕ್ಷೆ ಪಿಯುಸಿ ರಾಜ್ಯಮಟ್ಟದ ಪರೀಕ್ಷೆಗಳು ರಾಜ್ಯಾದ್ಯಂತ ನಡೆದಿವೆ. ಆದರೆ ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ. ಒಟ್ಟಾರೆ ಸೋಮವಾರ ಶಾಲಾ-ಕಾಲೇಜುಗಳಿಗೆ ಹೇಗೆ ಹೋಗಿ ಬರುವುದು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ಗೊಂದಲ ಮೂಡಿದೆ. ಇಷ್ಟಕ್ಕೆಲ್ಲ ನರೇಂದ್ರ ಮೋದಿ ಅವರ ಬೆಳಗಾವಿ ಕಾರ್ಯಕ್ರಮ ಕಾರಣವಾಗಿದ್ದು ಬಿಜೆಪಿ ಹಾಗೂ ಮೋದಿಯವರು ಇದಕ್ಕೆ ಉತ್ತರ ನೀಡುವಂತೆ ಕಾಂಗ್ರೆಸ್ ಒತ್ತಾಯಪಡಿಸಿದೆ.