ಬದ್ಲಾಪುರ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ಪ್ರತಿಷ್ಠಿತ ಶಾಲೆಯ ನರ್ಸರಿ ವಿಭಾಗದ ಇಬ್ಬರು 4 ವರ್ಷದ ಹೆಣ್ಣು ಮಕ್ಕಳ ಮೇಲೆ ಸ್ವಚ್ಛತಾ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದೀಗ ಆ.24ರ ಶನಿವಾರ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ.
ಮಹಿಳೆಯರ ಸುರಕ್ಷತೆಗೆ ಆಗ್ರಹಿಸಿ ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದೆ. ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಸಭೆ ನಡೆಸಿದ್ದ ಮಹಾ ವಿಕಾಸ್ ಅಘಾಡಿ ಬದ್ಲಾಪುರದ ಲೈಂಗಿಕ ಕಿರುಕುಳ ವಿಚಾರವಾಗಿ ಗಂಭೀರ ಚರ್ಚೆ ನಡೆಸಿ ಹೋರಾಟಕ್ಕೆ ಕರೆ ನೀಡಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಮಹಿಳೆಯರು, ಪುಟ್ಟ ಹೆಣ್ಣು ಮಕ್ಕಳಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಬಂದ್ಗೆ ಕರೆ ನೀಡಿದೆ. ಕಾಂಗ್ರೆಸ್, ಶಿವಸೇನೆ(ಉದ್ದವ್ ಬಣ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಶರದ್ ಬಣ) ಒಕ್ಕೂಟದ ಮಹಾ ವಿಕಾಸ್ ಅಘಾಡಿ ಪುಟ್ಟ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಆ.24 ರಂದು ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದೆ. ಮಹಾರಾಷ್ಟದ ದಾದರ್ ಸೇರಿ ಹಲವೆಡೆ ಮೂರೂ ಪಕಗಳ ನಾಯಕರು ಎನ್ಡಿಎ ಸರಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಮುಗ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಸುದ್ದಿ ತಿಳಿದು ರಾಜ್ಯ ಕ್ರುದ್ಧವಾಗಿದ್ದು, ಜನತೆ ಗಲ್ಲು ಶಿಕ್ಷೆಗೆ ಆಗ್ರಹಿಸಿದ್ದಾರೆ. ರಾಜ್ಯದೆಲ್ಲೆಡೆ ಮೂರು ದಿನಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಬುಧವಾರವೂ ಅನೇಕ ಸಂಘಟನೆಗಳು, ರಾಜಕೀಯ ನಾಯಕರು ಪ್ರತಿಭಟನೆಗೆ ಕೈಜೋಡಿಸಿದ್ದಾರೆ.
ಬದ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರೈಲು ನಡೆದು 10 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗಿದೆ. 2 ಸಾವಿರಕ್ಕೂ ಅಧಿಕ ಪ್ರತಿಭನಟಾಕಾರರು ಪೊಲೀಸ್ ಲಾಠಿ ಚಾರ್ಜ್ ನಡುವೆಯೂ ಪ್ರತಿಭಟನೆ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಲು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.