ಬೆಂಗಳೂರು:
“ಮಾಧ್ಯಮಗಳು ಆಪರೇಷನ್ ಹಸ್ತದ ಬಗ್ಗೆ ಮಾತನಾಡುತ್ತಿದ್ದೀರಿ. ನಾನು ಯಾವುದೇ ಕಾರಣಕ್ಕೂ ಆಪರೇಷನ್ ಹಸ್ತ ಮಾಡುವುದಿಲ್ಲ. ನಮ್ಮದು ಕೇವಲ ಕೋಆಪರೇಷನ್ ಮಾತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆ.ಆರ್ ಪುರಂನಲ್ಲಿ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ನಾವು ಕೇವಲ ಚುನಾವಣಾ ಸಮಯದಲ್ಲಿ ರಾಜಕಾರಣ ಮಾಡುತ್ತೇವೆ. ಈಗ ರಾಜಕಾರಣ ಮಾಡುವುದಿಲ್ಲ. ಮಾಜಿ ಸಚಿವ ಕೃಷ್ಣಪ್ಪ ಅವರು ನಮ್ಮ ನಾಯಕರು. ಅವರ ಸುಪುತ್ರಿ ಪೂರ್ಣಿಮಾ ಅವರು ನನಗೆ ಸಹೋದರಿ ಇದ್ದಂತೆ. ಅವರ ಅಳಿಯ ನನ್ನ ಸ್ನೇಹಿತರು. ಇಂದು ಅವರು ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಮಾಡಿ ಆಹ್ವಾನ ನೀಡಿದ್ದರು, ಹೀಗಾಗಿ ನಾನು ಇಲ್ಲಿಗೆ ಬಂದು ಭಗವಂತನ ಆಶೀರ್ವಾದ ಪಡೆದು ಊಟ ಮಾಡಿದ್ದೇನೆ” ಎಂದು ತಿಳಿಸಿದರು.