ನವದೆಹಲಿ: 26/11 ಮುಂಬೈ ದಾಳಿಯಿಂದ ಹಿಡಿದು 2024 ರ ಗುಲ್ಮಾರ್ಗ್ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯವರೆಗಿನ ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಸ್ಥಳಗಳನ್ನು ಭಾರತವು ಗುರಿಯಾಗಿಸಿ ದಾಳಿ ಮಾಡಿದೆ, ಈ ಸ್ಥಳಗಳಲ್ಲಿಯೇ ಹಲವಾರು ದಾಳಿಗಳನ್ನು ಯೋಜಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂಬ ಮಾಹಿತಿ ಆದಾರದ ಮೇಲೆ ಈ ಸ್ಥಳಗಳ ಮೇಲೆ ಭಾರತದ ಸೈನ್ಯ ವಾಯು ದಾಳಿ ನಡೆಸಿದೆ.
ಆಪರೇಷನ್ ಸಿಂಧೂರ್ನ ಭಾಗವಾಗಿ, ಭಾರತವು ಒಂಬತ್ತು ಸ್ಥಳಗಳಲ್ಲಿ 21 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಅವುಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ)ಇವೆ. ಪಹಲ್ಗಾಮ್ ದಾಳಿಯ ಸೇಡು ತೀರಿಸಿಕೊಳ್ಳುವುದು ಗುರಿಯಲ್ಲ, ಆದರೆ ಅಂತಹ ಇತರ ಅನೇಕ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದ್ದ ಭಯೋತ್ಪಾದಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಧ್ಯಮಗಳಿಗೆ 2019 ರ ಪುಲ್ವಾಮಾ ದಾಳಿ, 2016 ರ ಪಠಾಣ್ಕೋಟ್ ದಾಳಿ ಮತ್ತು ಅಂತಹ ಇತರ ಭಯೋತ್ಪಾದಕ ದಾಳಿಗಳಿಗೆ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿದ್ದ ಭಯೋತ್ಪಾದಕ ಸ್ಥಳಗಳನ್ನು ಮೇ 6 ಮತ್ತು 7 ರ ಮಧ್ಯರಾತ್ರಿ ಭಾರತೀಯ ಪಡೆಗಳು ಹೇಗೆ ಯಶಸ್ವಿಯಾಗಿ ಗುರಿಯಾಗಿಸಿಕೊಂಡವು ಎಂದು ವಿವರಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಹಿಂದಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಸ್ಥಳಗಳ ಮೇಲೆ ಕೇಂದ್ರೀಕರಿಸಿ ದಾಳಿ ಮಾಡಿದ್ದರ ಬಗ್ಗೆ ವಿವರಿಸಿದ್ದಾರೆ.
ಯಾವುದೇ ಮಿಲಿಟರಿ ಸೌಲಭ್ಯಗಳು ಅಥವಾ ನಾಗರಿಕ ಸಂಸ್ಥೆ ಅಥವಾ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸುವುದು ಈ ಕಾರ್ಯಾಚರಣೆಯ ಉದ್ದೇಶ ಎಂದು ಅವರು ಹೇಳಿದರು.
ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ ಮೇಲೆ ದಾಳಿ ಏಕೆ?
ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ ಎಂಬುದು , 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಂತಹ ದಾಳಿಗಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿದೆ. ಇದು ಮೌಲಾನಾ ಮಸೂದ್ ಅಜರ್ ಮತ್ತು ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಸೇರಿದಂತೆ ಜೆಇಎಂನ ಉನ್ನತ ನಾಯಕತ್ವದ ಕಾರ್ಯಚಟುವಟಿಕೆಗಳ ಸ್ಥಳವಾಗಿದೆ. ಪಾಕಿಸ್ತಾನದ ಐಎಸ್ಐ ಮತ್ತು ಗಲ್ಫ್ ದಾನಿಗಳಿಂದ ಧನಸಹಾಯ ಪಡೆದ ಇದು ಶಸ್ತ್ರಾಸ್ತ್ರ ತರಬೇತಿ ಮತ್ತು ಭಯೋತ್ಪಾದಕ ನೇಮಕಾತಿ ಮಾಡಿ ತರಬೇತಿ ನೀಡುತ್ತದೆ. ಈ ದಾಳಿಯು ಜೆಇಎಂನ ಪ್ರಮುಖ ನಾಯಕತ್ವ ಮತ್ತು ತರಬೇತಿ ಸ್ಥಳವನ್ನು ನಾಶಪಡಿಸುವ ಗುರಿಯನ್ನು ಹೊಂದಿದೆ.
ಮುರಿಡ್ಕೆಯ ಮರ್ಕಜ್ ತೈಬಾ ಮೇಲೆ ದಾಳಿ ಏಕೆ?
2008 ರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ನಡೆಸಿದ್ದ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮುರಿಡ್ಕೆಯ ಮರ್ಕಜ್ ತೈಬಾದಲ್ಲಿದೆ. ಅಜ್ಮಲ್ ಕಸಬ್ನಂತಹ ಮುಂಬೈ ದಾಳಿಕೋರರಿಗೆ ಇಲ್ಲಿನ ತರಬೇತಿ ಕ್ಯಾಂಪ್ನಲ್ಲಿ ತರಬೇತಿ ನೀಡಲಾಯಿತು. ಒಸಾಮಾ ಬಿನ್ ಲಾಡೆನ್ ನಿಂದ ಹಣಕಾಸು ನೆರವು ಪಡೆದಿದ್ದ ಇದು, ಹಫೀಜ್ ಸಯೀದ್ ಮತ್ತು ಝಕಿ-ಉರ್-ರೆಹಮಾನ್ ಲಖ್ವಿಯಂತಹ ಎಲ್ಇಟಿ ನಾಯಕರನ್ನು ಹೊಂದಿದೆ. ಇದು ವಾರ್ಷಿಕವಾಗಿ 1,000 ಕ್ಕೂ ಹೆಚ್ಚು ಯುವಕರಿಗೆ ಗೆರಿಲ್ಲಾ ಯುದ್ಧ, ಗುಪ್ತಚರ ಮತ್ತು ಸ್ಫೋಟಕಗಳ ಬಗ್ಗೆ ತರಬೇತಿ ನೀಡುತ್ತದೆ. ಎಲ್ಇಟಿಯ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಾಶ ಮಾಡುವುದು ಇದರ ಉದ್ದೇಶವಾಗಿತ್ತು.
ಸರ್ಜಲ್/ತೆಹ್ರಾ ಕಲಾನ್ ಸೌಲಭ್ಯದ ಮೇಲೆ ಏಕೆ ದಾಳಿ..?
ಈ ಜೆಇಎಂ ಭಯೋತ್ಪಾದಕ ಸಂಘಟನೆ ಲಾಂಚ್ಪ್ಯಾಡ್ ಸುರಂಗಗಳು ಮತ್ತು ಡ್ರೋನ್ಗಳ ಮೂಲಕ ಭಯೋತ್ಪಾದಕರು ಜಮ್ಮುವಿಗೆ ಒಳನುಸುಳುವುದನ್ನು ಸುಗಮಗೊಳಿಸುತ್ತದೆ. ಈ ಪ್ರದೇಶವು 2016 ರ ಪಠಾಣ್ಕೋಟ್ ದಾಳಿಗೆ ಸಂಬಂಧಿಸಿರುವುದರಿಂದ ಈ ಸ್ಥಳವನ್ನು ಗುರಿಯಾಗಿಸಲಾಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಖುರೇಷಿ ಹೇಳಿದರು.
ನಿಯಂತ್ರಣ ರೇಖೆಯಿಂದ (ಎಲ್ಒಸಿ) ಸರಿಸುಮಾರು 20 ಕಿ.ಮೀ ದೂರದಲ್ಲಿರುವ ಈ ಭಯೋತ್ಪಾದಕ ತರಬೇತಿ ಕೇಂದ್ರವು ಗಡಿಯಾಚೆಗಿನ ಸುರಂಗಗಳನ್ನು ಅಗೆಯಲು, ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಬೀಳಿಸಿ ಭಯೋತ್ಪಾದಕರಿಗೆ ತಲುಪಿಸಲು ಮತ್ತು ಜೆಇಎಂನ ಅಫಘಾನ್ ಕಾರ್ಯಾಚರಣೆಗಳಿಗೆ ನೆಲೆಯಾಗಿದೆ. ಒಳನುಸುಳುವಿಕೆ ಜಾಲಗಳು ಮತ್ತು ಡ್ರೋನ್-ಕಳ್ಳಸಾಗಣೆ ಕೇಂದ್ರಗಳನ್ನು ನಾಶಮಾಡುವ ಗುರಿಯನ್ನು ಆಪರೇಶನ್ ಸಿಂಧೂರ ಹೊಂದಿದೆ.
ಸಿಯಾಲ್ಕೋಟ್ನ ಮೆಹಮೂನಾ ಜೋಯಾ ಮೇಲೆ ಏಕೆ ದಾಳಿ..?
ಈ ಸೌಲಭ್ಯವು ಜಮ್ಮುವಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (HM) ದಾಳಿಗಳನ್ನು ಕಾರ್ಯತಂತ್ರ ಯೋಜಿಸುವ ನೆಲೆಯಾಗಿದೆ, ಇದನ್ನು ಐಎಸ್ಐ (ISI) ಬೆಂಬಲಿತ ಕಮಾಂಡರ್ ಇರ್ಫಾನ್ ತಂಡಾ ನಡೆಸುತ್ತಿದ್ದಾನೆ. ಇದು ಗಡಿ ದಾಳಿಗಳು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಗಾಗಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತದೆ. ಜಮ್ಮುವಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (HM) ಕಾರ್ಯಾಚರಣೆಯ ಸಾಮರ್ಥ್ಯವನ್ನು ಕುಗ್ಗಿಸುವ ಗುರಿಯನ್ನು ಈ ಕಾರ್ಯಾಚರಣೆ ಹೊಂದಿದೆ.
ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ (PoK) ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಯಾಕೆ..?
ಈ ಸೌಲಭ್ಯವು ಭಯೋತ್ಪಾದಕರಿಗೆ ತರಬೇತಿ ನೀಡಿತು ಮತ್ತು ಧಂಗ್ರಿ (2023) ಮತ್ತು ರಿಯಾಸಿ (2024) ಭಯೋತ್ಪಾದಕ ದಾಳಿಗಳನ್ನು ಯೋಜಿಸಿದೆ ಎಂದು ತಿಳಿದುಬಂದಿದೆ, ಇದರ ಪರಿಣಾಮವಾಗಿ 16 ನಾಗರಿಕರು ಸಾವಿಗೀಡಾಗಿದ್ದರು. ಇದು ಪೂಂಚ್-ರಾಜೌರಿ ಪ್ರದೇಶಕ್ಕೆ ಭಯೋತ್ಪಾದಕರು ಒಳನುಸುಳಲು ಈ ಎಲ್ಇಟಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 100 ಕ್ಕೂ ಹೆಚ್ಚು ಉಗ್ರರನ್ನು ಹೊಂದಿದೆ. ಆಪರೇಷನ್ ಸಿಂಧೂರ ಉದ್ದೇಶ ಎಲ್ಇಟಿಯ ಸಾರಿಗೆ ಮಾರ್ಗಗಳನ್ನು ನಾಶಪಡಿಸುವುದಾಗಿದೆ.
ಈ ಸೌಲಭ್ಯವು ಭಯೋತ್ಪಾಕ ಸಂಘಟನೆ ಜೆಎಎಂನ ಶಸ್ತ್ರಾಸ್ತ್ರ ಡಿಪೋ ಮತ್ತು ಖಾರಿ ಜರ್ರಾರ್ ನೇತೃತ್ವದ ನಗ್ರೋಟಾ (2016) ನಂತಹ ದಾಳಿಗಳಿಗೆ ಯೋಜನಾ ಕೇಂದ್ರವಾಗಿದೆ. ಇದು ಅಫ್ಘಾನಿಸ್ತಾನದಿಂದ ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತದೆ ಮತ್ತು ಸ್ನೈಪರ್ಗಳಿಗೆ ತರಬೇತಿ ನೀಡುತ್ತದೆ. ಜೆಎಂಎಂನ ಲಾಜಿಸ್ಟಿಕ್ಸ್ ಪೂರೈಕೆ ಸರಪಳಿಯನ್ನು ನಿರ್ಮೂಲನೆ ಮಾಡುವುದು ಗುರಿಯಾಗಿತ್ತು.
ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ (ಪಿಒಕೆ):
ಮಸ್ಕರ್ ರಹೀಲ್ ಶಾಹಿದ್ ಹಿಜ್ಬುಲ್ ಮುಜಾಹಿದ್ದೀನ್ನ ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) ದಾಳಿಗಳಿಗೆ ಪ್ರಮುಖ ತರಬೇತಿ ಶಿಬಿರವಾಗಿದ್ದು, ಇದನ್ನು ಸೈಯದ್ ಸಲಾಹುದ್ದೀನ್ ಮೇಲ್ವಿಚಾರಣೆ ಮಾಡುತ್ತಾನೆ. ಇದು ಉಗ್ರಗಾಮಿಗಳಿಗೆ ಸ್ನೈಪರ್ ತಂತ್ರಗಳು ಮತ್ತು ಬಹಳ ಕಾಲ ಕಷ್ಟದ ಸ್ಥಿತಿಯಲ್ಲಿ ಬದುಕುಳಿಯುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡುತ್ತದೆ. ಭಾರತವು ಹಿಜ್ಬುಲ್ಲಾ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಗಡಿಯಾಚೆಗಿನ ದಾಳಿ ಸಾಮರ್ಥ್ಯಗಳನ್ನು ತಟಸ್ಥಗೊಳಿಸಲು ಈ ಸ್ಥಳವನ್ನು ಗುರಿಯಾಗಿಸಿಕೊಂಡಿದೆ.
ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ (ಪಿಒಕೆ) :
ಎಲ್ಇಟಿಯ ಪ್ರಮುಖ ತರಬೇತಿ ಸೌಲಭ್ಯವಾದ ಇದು 26/11 ದಾಳಿಕೋರರಿಗೆ ತರಬೇತಿ ನೀಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಪಾಕಿಸ್ತಾನದ ಐಎಸ್ಐ ಮತ್ತು ಸೇನಾ ತರಬೇತುದಾರರು ಇದಕ್ಕೆ ಸಪೋರ್ಟ್ ಮಾಡುತ್ತಾರೆ. ಇದು ನೇಮಕಾತಿ ಮಾಡಿಕೊಂಡು ಭಯೋತ್ಪಾದಕರಿಗೆ ಸುಧಾರಿತ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತದೆ. ಈ ಕಾರಣಕ್ಕೆ ಇಲ್ಲಿ ದಾಳಿ ನಡೆಸಲಾಗಿದೆ.
ಮುಜಫರಾಬಾದ್ (ಪಿಒಕೆ)ನ ಸೈಯದ್ನಾ ಬಿಲಾಲ್ ಮರ್ಕಜ್ ಮೇಲೆ ದಾಳಿ ಮಾಡಿದ್ದು ಯಾಕೆ..?
ಕಾಶ್ಮೀರಕ್ಕೆ ನುಸುಳುತ್ತಿರುವ ಜೆಇಎಂ ಭಯೋತ್ಪಾದಕರ ಸಾರಿಗೆ ಶಿಬಿರವಾದ ಈ ಸೌಲಭ್ಯವು ನಗ್ರೋಟಾ 2016 ಮತ್ತು ಪುಲ್ವಾಮಾ 2019 ರ ದಾಳಿಗೆ ಸಂಬಂಧಿಸಿದೆ. ಇದು 50–100 ಭಯೋತ್ಪಾದಕರಿಗೆ ತರಬೇತಿ ನೀಡುತ್ತದೆ ಮತ್ತು ಎಸ್ಎಸ್ಜಿ (ಪಾಕ್ ಸೈನ್ಯ) ಇಲ್ಲಿ ತರಬೇತಿ ನೀಡುತ್ತದೆ. ಭಾರತದ ದಾಳಿಯು ಜೆಇಎಂನ ಭಯೋತ್ಪಾದಕರ ಒಳನುಸುಳುವಿಕೆ ಮಾರ್ಗಗಳನ್ನು ನಾಶ ಪಡಿಸುವ ಮತ್ತು ಪಹಲ್ಗಾಮ್ ಮಾತ್ರವಲ್ಲದೆ ಪುಲ್ವಾಮಾ ಮತ್ತು ಇತರ ಹಲವಾರು ಭಯೋತ್ಪಾದಕ ದಾಳಿಗಳಿಗೂ ಸೇಡು ತೀರಿಸಿಕೊಳ್ಳುವ ಗುರಿಯನ್ನು ಹೊಂದಿದೆ.