ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳು
ಸಾಲಗಾರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿದ ಸುಗ್ರೀವಾಜ್ಞೆಯ ಕುರಿತು ಶನಿವಾರ ಚರ್ಚೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ, ಹಲವು ವಿಚಾರಗಳನ್ನು ಕಾನೂನು ಚೌಕಟ್ಟಿನ ಒಳಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ನಿಭಾಯಿಸಬೇಕು. ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ನೀಡುವ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವ ಹುನ್ನಾರವನ್ನು ತಡೆಯಲು ಆನ್ಲೈನ್ ಪೋರ್ಟಲ್ ಮಾಡಿ, ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂಬ ಮಾಹಿತಿ ನೀಡಬೇಕು. ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ರಿಸರ್ವ್ ಬ್ಯಾಂಕ್ ನೀತಿಗೆ ಅನುಗುಣವಾಗಿರಬೇಕು ಎಂಬ ನಿಯಮಗಳನ್ನು ಜಾರಿಗೊಳಿಸಲು ಸಭೆ ನಿರ್ಧರಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿ ಆಗಿರಬೇಕು. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನು ಸರ್ಕಾರ ತಿರಸ್ಕರಿಸಬಹುದು. ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಹಾರಗಳ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳನ್ನು ಒಳಗೊಂಡ ಒಂಬುತ್ಸುಮನ್ ನೇಮಕ ಮಾಡಬೇಕು. ಈ ಕಂಪನಿಗಳು ಸಾಲದ ಹೆಸರಿನಲ್ಲಿ ಬಡ ಜನರಿಂದ ಯಾವುದೇ ವಸ್ತುಗಳು ಅಥವಾ ಆಸ್ತಿಗಳನ್ನು ಅಡಮಾನ ಇಟ್ಟುಕೊಳ್ಳಬಾರದು. ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡಬಾರದು ಎಂಬ ಷರತ್ತು ವಿಧಿಸಲು ಕೂಡಾ ತೀರ್ಮಾನಿಸಲಾಗಿದೆ.