ಬೆಳಗಾವಿ : ಸದಾ ಹೆಚ್ಚಿನ ಪ್ರಯಾಣಿಕರನ್ನು ಹೊತ್ತುಯುತ್ತಿದ್ದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಇದು ಹಿನ್ನಡೆಯ ಸಂಗತಿ. ನೆರೆಯ ಹುಬ್ಬಳ್ಳಿ ವಿಮಾನ ನಿಲ್ದಾಣ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
ರಾಜ್ಯದ ಇತರ ದೇಶೀಯ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಆದರೆ ಇಷ್ಟು ದಿನಗಳವರೆಗೆ ಬೆಳಗಾವಿ ವಿಮಾನ ನಿಲ್ದಾಣ ಮುಂಚೂಣಿಯಲ್ಲಿದ್ದು ಈಗ ಆ ಸ್ಥಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಗಿಟ್ಟಿಸಿಕೊಂಡಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರತಿ ತಿಂಗಳು ಸರಾಸರಿ 30 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಿದರೆ, ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿ ತಿಂಗಳು 25 ಮಂದಿ ಪ್ರಯಾಣಿಸಿದ್ದಾರೆ. ಮೈಸೂರಿನಿಂದ ಪ್ರತಿ ತಿಂಗಳು ಪ್ರಯಾಣಿಸುವವರ ಸಂಖ್ಯೆ 8 ಸಾವಿರ ಇದ್ದರೆ, ಕಲಬುರಗಿಯಲ್ಲಿ ಸಂಖ್ಯೆ ಎರಡು ಸಾವಿರ ದಾಟಿಲ್ಲ.
2023–24ರ ಸಾಲಿನಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಚರಿಸಿದ ಪ್ರಯಾಣಿಕರ ಸಂಖ್ಯೆ, ಹಿಂದಿನ ವರ್ಷಕ್ಕಿಂತಲೂ ಕ್ರಮವಾಗಿ ಶೇ 11.2ರಷ್ಟು ಮತ್ತು ಬೆಳಗಾವಿ ಶೇ 4.9ರಷ್ಟು ಏರಿಕೆಯಾಗಿದೆ. ಮೈಸೂರು ಮತ್ತು ಕಲಬುರಗಿ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ಸಂಖ್ಯೆ ಶೇ 32ರಷ್ಟು ಹಾಗೂ ಶೇ 30.7ರಷ್ಟು ಕ್ರಮವಾಗಿ ಇಳಿಕೆಯಾಗಿದೆ.
2024-25ರ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಸಂಖ್ಯೆ ಶೇ 3.5ರಷ್ಟು, ಮೈಸೂರು ಶೇ 8.9ರಷ್ಟು ಹಾಗೂ ಕಲಬುರ್ಗಿಯಿಂದ ಶೇ 43.6 ರಷ್ಟು ಕಡಿಮೆಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಸಂಖ್ಯೆ ಶೇ 8.9ರಷ್ಟು ಏರಿಕೆಯಾಗಿದೆ. ಆದರೆ, ದೊಡ್ಡ ಪ್ರಮಾಣದ ಬದಲಾವಣೆಗಳು ಆಗಿಲ್ಲ.
ಏಕಕಾಲಕ್ಕೆ ಮೂರು ವಿಮಾನಗಳನ್ನು ನಿಲುಗಡೆ ಮಾಡಲು ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವಕಾಶವಿದೆ. ಒಟ್ಟು ಒಂಬತ್ತು ವಿಮಾನಗಳು ನಿಲುಗಡೆ ಮಾಡುವಂತಹ ವ್ಯವಸ್ಥೆ ಮಾಡಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಏರೋಬ್ರಿಡ್ಜ್ (ನಿಲ್ದಾಣದಿಂದ ಪ್ರಯಾಣಿಕರು ನೇರವಾಗಿ ವಿಮಾನದೊಳಗೆ ಪ್ರವೇಶಿಸುವುದು) ನಿರ್ಮಾಣ ಹಂತದಲ್ಲಿವೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಕ್ರಮೇಣ ವಿಮಾನಯಾನ ಸೇವೆ ನೀಡುವ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿವೆ ಎಂದು ರೂಪೇಶಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ
ತಿಳಿಸಿದ್ದಾರೆ.
ರಾಜ್ಯದ ಅತ್ಯಂತ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಎಂಬ ಬೇಡಿಕೆ ದಶಕಗಳ ಬೇಡಿಕೆಯಾಗಿದೆ. ಆದರೆ ಹುಬ್ಬಳ್ಳಿ-ಧಾರವಾಡದವರ ತೀವ್ರ ಪ್ರಭಾವದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹಿನ್ನಡೆ ಆಗುತ್ತಿರುವುದು ಹೊಸದೇನಲ್ಲ. ಜೊತೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಿರುವ ಹಿಂದೆ ತೆರೆಮರೆಯ ಕೈವಾಡ ಅಡಗಿರುವುದು ಸುಳ್ಳಲ್ಲ. ಉದ್ದೇಶಪೂರ್ವಕವಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಿರುವ ಪರಿಣಾಮವಾಗಿ ಬೆಳಗಾವಿಯಲ್ಲಿ ಈಗ ಪ್ರಯಾಣಿಕರ ಸಂಖ್ಯೆ ತೀವ್ರ ಕುಸಿತವಾಗಿರುವ ಬಗ್ಗೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಗಂಭೀರವಾಗಿ ಗಮನಹರಿಸಬೇಕು. ಬೆಳಗಾವಿ ಎರಡನೇ ರಾಜಧಾನಿ. ಜೊತೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೇಂದ್ರ ಬಿಂದು. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚು ಹೆಚ್ಚು ವಿಮಾನಗಳ ಆಗಮನವಾಗುವಂತೆ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರ ಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆತಂಕದ ದಿನ ಎದುರಾಗುವುದರಲ್ಲಿ ಯಾವ ಸಂದೇಹವು ಇಲ್ಲ.