ಬೆಂಗಳೂರು :14ನೇ ವಯಸ್ಸಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ ಭಾರತೀಯ ತಂಡದ ಭವಿಷ್ಯದ ಭರವಸೆಯಾಗಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಅವರ ಬ್ಯಾಟಿಂಗ್ ಪರಿ ನೋಡಿದ ಅನೇಕರು ಈ ಆಟಗಾರ ಶೀಘ್ರದಲ್ಲೇ ಭಾರತೀಯ ತಂಡಕ್ಕೆ ಆಡಬೇಕೆಂಬ ಭಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದರೆ 14 ವರ್ಷದ ವೈಭವ್ ಸದ್ಯಕ್ಕೆ ಭಾರತೀಯ ತಂಡವನ್ನು ಸೇರಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಐಸಿಸಿ ನಿಯಮ. ಈಗ ಅವರನ್ನು ಯಾವ ವಯಸ್ಸಿನ ಕಾರಣಕ್ಕೆ ಹೊಗಳಲಾಗುತ್ತಿದೆಯೋ, ಅದೇ ವಯಸ್ಸಿನ ಕುರಿತು ಐಸಿಸಿ ನಿಯಮಗಳು ಕೆಲವು ನಿರ್ಬಂಧಗಳನ್ನು ಹೇರಿದೆ.
ಇದು 19 ವರ್ಷದೊಳಗಿನವರ ಕ್ರಿಕೆಟ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅನ್ವಯಿಸುತ್ತದೆ. ಐಪಿಎಲ್ ಮತ್ತು ರಣಜಿ ಟ್ರೋಫಿಯಂತೆ ದೇಶೀಯ ಕ್ರಿಕೆಟ್ಗೆ ಈ ನಿಯಮಗಳು ಅನ್ವಯಿಸದ ಕಾರಣ ವೈಭವ್ ಈಗ ಐಪಿಎಲ್ ಪಂದ್ಯಗಳಲ್ಲಿ ಆಡಲು ಸಮರ್ಥರಾಗಿದ್ದಾರೆ.
ಐಸಿಸಿ ನಿಯಮ 4.1 ರ ಪ್ರಕಾರ, ಆಟಗಾರನೊಬ್ಬ 15 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅರ್ಹನಾಗಿರುತ್ತಾನೆ. ಆಟಗಾರರ ಸುರಕ್ಷತೆಯನ್ನು ಸುಧಾರಿಸಲು 15 ವರ್ಷ ವಯಸ್ಸಿ ಆಟಗಾರ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯ ಎಂದು ನಿಯಮ ಹೇಳುತ್ತದೆ.