➡️ ವರಮಹಾಲಕ್ಷ್ಮೀ ದಿನದಂದೇ ಲಕ್ಷ್ಮೀ ನಾಡಿಂದ ಕಾಲ್ಕಿತ್ತ “ಗೃಹಲಕ್ಷ್ಮಿ”
➡️ ಕುಂಟು ನೆಪ ಹೇಳಿ ಬೆಳಗಾವಿ ಆಯೋಜನಾ ಭಾಗ್ಯ ಕಸಿದುಕೊಂಡ ಸಿ.ಎಂ…!?
➡️ ಮೈಸೂರು ಪಾಕ್…! ಬೆಳಗಾವಿಗೆ ಶಾಕ್…!!; ಅನ್ಯಾಯ ಸಾಕ್ ಸಾಕ್…!!!
➡️ ಹೆಬ್ಬಾಳಕರ ಹಣಿಯಲು ನಡೆಯುತಿದೆಯಾ ಪ್ರಬಲ ರಾಜಕೀಯ ಹುನ್ನಾರ…!
ಜನ ಜೀವಾಳ ವಿಶೇಷ : ಬೆಳಗಾವಿ :
ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಬೆಳಗಾವಿಯವರೇ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ ಅವರ ತವರಿನಲ್ಲಿ ಲೋಕಾರ್ಪಣೆ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಬೆಳಗಾವಿಯ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಬೆಳಗಾವಿ ಬದಲು ಮೈಸೂರಿಗೆ ಕಾರ್ಯಕ್ರಮ ಶಿಫ್ಟ್ ಆಗಿರುವುದು ಬೆಳಗಾವಿ ಜಿಲ್ಲೆಯ ಜನತೆಯ ಪಾಲಿಗೆ ಬಿಗ್ ಶಾಕ್.
ಕರುನಾಡಿನ ರಾಜಕೀಯದಲ್ಲಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ ದಿನೇ ದಿನೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರ ಅಪಾರ ಜನಪ್ರಿಯತೆ ಸಹಿಸಲಾಗದೆ ಕಾಣದ ಶಕ್ತಿಗಳು ಇದನ್ನು ಮೈಸೂರಿಗೆ ಶಿಫ್ಟ್ ಆಗುವಂತೆ ನೋಡಿಕೊಂಡಿವೆ ಎಂಬ ಮಾತುಗಳು ಇದೀಗ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಪ್ರಮುಖವಾಗಿ ಕೇಳಿ ಬಂದಿದೆ.
ಬೆಳಗಾವಿಯಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಹಲಕ್ಷ್ಮೀ ಯೋಜನೆಯನ್ನು ಲೋಕಾರ್ಪಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಆಗಸ್ಟ್ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿಲು ಸಕಲ ಸಿದ್ಧತೆಗಳು ನಡೆದಿದ್ದವು.
ಪೆಂಡಾಲ್ ಸೇರಿದಂತೆ ಸಕಲ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಆದರೆ ಇದೀಗ ನಗರದ ಸಿಪಿಎಡ್ ಮೈದಾನದಲ್ಲಿ ಹಾಕಿದ್ದ ಪೆಂಡಾಲ್ ಗಳನ್ನೇ ಕಿತ್ತೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ.ಈ ಬಗ್ಗೆ ವಿಚಾರಿಸಿದಾಗ ಬೆಳಗಾವಿಯ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಮೈಸೂರಿಗೆ ರವಾನೆಯಾಗಿದೆ ಎಂದು ಪೆಂಡಾಲ್ ಹಾಕುತ್ತಿದ್ದ ಸಿಬ್ಬಂದಿ ಜನಜೀವಾಳಕ್ಕೆ ಮಾಹಿತಿ ನೀಡಿದ್ದಾರೆ
ಗೃಹಲಕ್ಷ್ಮೀ ಯೋಜನೆ ರಾಜ್ಯದ ಕಾಂಗ್ರೆಸ್ ಸರಕಾರದ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಕೋಟಿಗೂ ಅಧಿಕ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಯೋಜನೆಗೆ ಬಹುತೇಕ ಮಹಿಳೆಯರು ಶಹಬ್ಬಾಸ್ ಗಿರಿ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಪಾಲಿಗೆ ಮಹಿಳೆಯರು ಭಾರೀ ಬೆಂಬಲ ವ್ಯಕ್ತಪಡಿಸಿದ್ದು ಈ ಯೋಜನೆ ಕಾಂಗ್ರೆಸ್ ಸರ್ಕಾರಕ್ಕೆ ಆನೆ ಬಲ ತಂದುಕೊಟ್ಟಿದೆ.
ಬೆಳಗಾವಿಯಲ್ಲೇ ಗ್ರಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಲಕ್ಷ್ಮೀ ಹೆಬ್ಬಾಳಕರ್ ಅವರ ತವರು ಜಿಲ್ಲೆಯಾಗಿರುವ ಕಾರಣಕ್ಕೆ ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಲು ಸ್ಥಳ ನಿಗದಿಪಡಿಸಲಾಗಿತ್ತು. ಅದರಂತೆ ಎಲ್ಲಾ ಸಿದ್ಧತೆಗಳು ನಡೆಯದಿದ್ದವು. ಪೆಂಡಾಲ್ ಸೇರಿದಂತೆ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ ಇದೀಗ ಹಾಕಿರುವ ಪೆಂಡಾಲ್ ಸೇರಿದಂತೆ ಒಟ್ಟಾರೆ ಕಾರ್ಯಕ್ರಮವನ್ನೇ ಮೈಸೂರಿಗೆ ಒಯ್ಯುತ್ತಿರುವುದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ಸಿಗೆ ತೀವ್ರ ಅಘಾತ ನೀಡಿದೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಕಾರ್ಯಕ್ರಮ ಮಾಡಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಗೆ ಈ ಕಾರ್ಯಕ್ರಮ ನವ ಚೈತನ್ಯ ಹಾಗೂ ನವೋತ್ಸವ ತಂದುಕೊಡುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪ್ರಬಲ ಶಕ್ತಿಯಾಗಿ ಲೋಕಸಭೆಗೆ ಹೆಚ್ಚಿನ ಸದಸ್ಯರನ್ನು ಈ ಭಾಗದಿಂದ ಕಳಿಸಲು ನೆರವಾಗುತ್ತಿತ್ತು. ಆದರೆ ಇದೀಗ ಸ್ವತಃ ಮುಖ್ಯಮಂತ್ರಿ ಅವರ ತವರು ನೆಲವಾಗಿರುವ ಮೈಸೂರು ಭಾಗಕ್ಕೆ ಕಾರ್ಯಕ್ರಮವನ್ನು ಒಯ್ಯುತ್ತಿರುವ ಪರಿಣಾಮ ಉತ್ತರ ಕರ್ನಾಟಕದ ಜಿಲ್ಲೆಗಳ ಜನತೆಗೆ ಕೈ ಪಕ್ಷ ಬಿಗ್ ಶಾಕ್ ನೀಡಿದಂತಾಗಿದೆ.