ಬೆಳಗಾವಿ :
ಸರ್ಕಾರದ ನಿರ್ದೇಶನಂತೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಕ್ಟೋಬರ್ 28 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಕೋಟಿಕಂಠ ಗೀತಗಾಯನ ಕಾರ್ಯಕ್ರಮ ಆಯೋಜಿಸಿದ್ದು, ಸಂಬಂಧಿತ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಅ.20) ನಡೆದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಜ್ಯಾದ್ಯಂತ ಏಕಕಾಲಕ್ಕೆ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 2 ಸ್ಥಳಗಳಾದ ಸುವರ್ಣ ವಿಧಾನಸೌಧ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 28 ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಮೊದಲು ಸುವರ್ಣ ವಿಧಾನ ಸೌಧದ ಜೊತೆಗೆ ಕೆ.ಎಲ್.ಇ ಸಂಸ್ಥೆಯ ಜಿರಗೆ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸ್ಥಳಾವಕಾಶ ಕಡಿಮೆ ಇರುವುದರಿಂದ ಸುವರ್ಣ ವಿಧಾನ ಸೌಧ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ಒಟ್ಟು 40 ರಿಂದ 45 ನಿಮಿಷ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿತಂತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಒಟ್ಟು 6 ಗೀತೆಗಳನ್ನು ಹಾಡಲಾಗುವದು ಎಂದು ತಿಳಿಸಿದರು.
ಕೋಟಿ ಕಂಠ ಗಾಯನಕ್ಕೆ ನೋಂದಣಿ:
ಈಗಾಗಲೇ ಅಕ್ಟೋಬರ್ 11 ರಿಂದ ಆನ್ ಲೈನ್ ಮೂಲಕ ನೋಂದಣಿ ಪ್ರಾರಂಭವಾಗಿದ್ದು, ಸಂಘ ಸಂಸ್ಥೆಗಳ ಸೇರಿದಂತೆ ಭಾಗವಹಿಸುವರು ನೋಂದಾಯಿಸಿಕೊಳ್ಳಬಹುದಾಗಿದೆ. ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆನ್ ಲೈನ್ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಲಕ್ಷಕಂಠ ಗಾಯನ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಈ ಬಾರಿ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ತಾಲೂಕಾ ಮಟ್ಟದಲ್ಲಿ ಆಯೋಜನೆ:
ತಾಲೂಕಾ ಮಟ್ಟದಲ್ಲಿ ಸ್ಥಳ ನಿಗದಿಪಡಿಸಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ತಹಶೀಲ್ದಾರಗಳಿಗೆ ನಿರ್ದೇಶನ ನೀಡಲಾಗುವದು. ಕೋಟಿ ಕಂಠ ಗೀತಗಾಯನ ಕಾರ್ಯಕ್ರಮವಾಗಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಕನ್ನಡಪರ ಸಂಘಟನೆಗಳು, ಹಿರಿಯ ನಾಗರಿಕರು, ಜಿಲ್ಲಾ ಮಟ್ಟದ ಅಧಿಕಾರಿ ಸಿಬ್ಬಂದಿಗಳು, ಎನ್.ಜಿ. ಓ ಗಳು, ಮಹಿಳಾ ಸಂಘಗಳು, ಇತರೆ ಸಂಘ ಸಂಸ್ಥೆಗಳು ಬಾಗವಸಿಲು ಸೂಚಿಸಬೇಕು ಎಂದರು.
ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಲು ಸೂಚನೆ:
ಅಂಗನವಾಡಿ, ಆಶಾ ಕಾರ್ಯ ಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳು ಪೌರ ಕಾರ್ಮಿಕರು ಭಾಗವಹಿಸಲು ತಿಳಿಸಬೇಕು. ಅದೇ ರೀತಿಯಲ್ಲಿ ಮಹಾನಗರ ಮಹಾನಗರ ಪಾಲಿಕೆಯ ವತಿಯಿಂದ ಧ್ವನಿ ವರ್ಧಕಗಳನ್ನು ಅಳವಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಕ್ಕಳ ಸುರಕ್ಷತೆ ಕಾಪಾಡಲು ಸೂಚನೆ:
ಮಕ್ಕಳು ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ಕೊಡಬೇಕು. ಮಕ್ಕಳು ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅದೇ ರೀತಿಯಲ್ಲಿ ಸುವರ್ಣ ವಿಧಾನ ಸೌಧ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ಉಸ್ತುವಾರಿಗಾಗಿ ಆಯಾ ಸ್ಥಳಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದ ರೂಪರೇಷೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ವಿವರಿಸಿದರು.
ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕೋಟಿ ಕಂಠ ಗಾಯನಕ್ಕೆ ನೋಂದಣಿ
ಜಿಲ್ಲೆಯಾದ್ಯಂತ ನಡೆಯಲಿರುವ ಹಮ್ಮಿಕೊಂಡ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬಹುದಾಗಿದ್ದು, ಆಸಕ್ತರು ಆನ್ಲೈನ್ ಲಿಂಕ್ https://kannadasiri.karnataka.gov.in/kkg/public/ ಮೂಲಕ ಅಕ್ಟೋಬರ 28 ರೊಳಗಾಗಿ ಹೆಸರು ನೋಂಣಿ ಮಾಡಿಕೊಳ್ಳಬಹುದಾಗಿದೆ. ಸ್ವಯಂ ಚಾಲಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಆನ್ಲೈನ್ ಪ್ರಮಾಣ ಪತ್ರ ಸಹ ನೀಡಲಾಗುತ್ತಿದೆ.