ಕದಂಬೋತ್ಸವ ಮತ್ತೊಂದು ಯಡವಟ್ಟು ಬಹಿರಂಗವಾಗಿದೆ. ಬನವಾಸಿ ಯಾವ ಜಿಲ್ಲೆಯಲ್ಲಿದೆ.. ಯಾವ ತಾಲೂಕಿನಲ್ಲಿದೆ ಎನ್ನುವುದೇ ಅಧಿಕಾರಿಗಳಿಗೆ ಗೊತ್ತಿಲ್ಲ !. ಶಿರಸಿ ತಾಲೂಕಿನ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿ ಕೊರತೆಯಿಂದ ಮುಖ್ಯಮಂತ್ರಿ ಕಚೇರಿ ಮುಜುಗರಕ್ಕೆ ಒಳಗಾಗಬೇಕಾಯಿತು. ಕದಂಬೋತ್ಸವ ಕಾಟಚಾರಕ್ಕೆ ಎಂಬಂತೆ ನಡೆಸಿದ ಶಿರಸಿಯ ಅಧಿಕಾರಿಗಳ ವರ್ತನೆಗೆ ಸಾಹಿತ್ಯ ಪ್ರೇಮಿಗಳು ಹಿಡಿಶಾಪ ಹಾಕಿದ್ದು ಒಟ್ಟಾರೆ ಈ ಸಲದ ಕದಂಬೋತ್ಸವ ಜನರ ಆಕ್ರೋಶಕ್ಕೆ ತುತ್ತಾಗಿದೆ. ಕದಂಬೋತ್ಸವದ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ತಲೆದಂಡವಾಗುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಕಚೇರಿ ಈ ಬಗ್ಗೆ ಯಾವ ಅಧಿಕಾರಿಗಳು ತಪ್ಪು ಎಸಗಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು : ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಆರಂಭಗೊಂಡಿದ್ದು, ಇಂದು ಕೊನೆಗೊಳ್ಳಲಿದೆ. ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಸಿಎಂ ಕಚೇರಿ, ಬನವಾಸಿಯು ಉತ್ತರ ಕನ್ನಡ ಜಿಲ್ಲೆಯ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯಲ್ಲಿದೆ ಎಂದು ಎಕ್ಸ್ ಖಾತೆಯಲ್ಲಿ ತಪ್ಪಾಗಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದೆ. ಕನ್ನಡದ ಆದಿ ಕವಿ ವರ್ಣಿಸಿದ್ದ ಬನವಾಸಿಯು ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿದೆ ಎಂದು ಸಿಎಂ ಕಚೇರಿ ಸಿಬ್ಬಂದಿಗೇ ತಿಳಿದಿಲ್ಲ ಎನ್ನುವುದು ವಿಷಾದನೀಯ ಸಂಗತಿ.
ಮುಖ್ಯಮಂತ್ರಿ ಕಾರ್ಯಕ್ರಮಗಳ ವಿವರಗಳು ಮತ್ತು ಮುಖ್ಯಮಂತ್ರಿಗಳ ಹೇಳಿಕೆ, ಆದೇಶಗಳನ್ನು ತಿಳಿಸಲು ಬಳಸುವ ಅಧಿಕೃತ ಎಕ್ಸ್ ಖಾತೆಯಲ್ಲಿ (ಟ್ವಿಟರ್), ಬನವಾಸಿ ಕದಂಬೋತ್ಸವದ ನೇರಪ್ರಸಾರದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಮಾಡುವಾಗ ಸಿಬ್ಬಂದಿ ಮಾಡಿದ ಎಡವಟ್ಟೇನೆಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನವಾಸಿ ಎಂದು ತಪ್ಪಾಗಿ ಬರೆದುಕೊಳ್ಳಲಾಗಿದೆ.
“ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಾದ ಕೆಲ ಹೊತ್ತಿನ ಬಳಿಕ ಪ್ರಮಾದದಿಂದ ಎಚ್ಚೆತ್ತ ಸಿಬ್ಬಂದಿ, ತಪ್ಪನ್ನು ಸರಿಪಡಿಸಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ತಿಳಿಸಿದ್ದಾರೆ.