ಬೆಳಗಾವಿ : ಬೆಳಗಾವಿಯ ಭೂ ದಾಖಲೆಗಳ ಇಲಾಖೆಯಲ್ಲಿ ಅಧಿಕಾರಿಗಳು ಹಣ ಪಡೆದು ನಕ್ಷೆಯನ್ನೇ ಬದಲಿಸುತ್ತಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದ ಇಲಾಖೆಯ ಉಪನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವಂತೆ ರೈತ ಸಂಘಟನೆಗಳು, ಜಿಲ್ಲಾಧಿಕಾರಿಯನ್ನು ಒತ್ತಾಯಿಸಿವೆ.
ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೆ ರೈತ ಸಂಘಟನೆ ಸದಸ್ಯರು ಮನವಿ ಅರ್ಪಿಸಿದ್ದಾರೆ.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿವೆ. ತಕ್ಷಣ ಕಬ್ಬಿನ ಬಾಕಿ ಬಿಲ್ ಪಾವತಿ ಮಾಡಬೇಕು. ಬರದಿಂದ ಕಂಗೆಟ್ಟಿರುವ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಿಸಬೇಕು. ರೈತರ ವಾಹನಗಳನ್ನು ಪೊಲೀಸರು ಅನವಶ್ಯಕವಾಗಿ ತಡೆಗಟ್ಟಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ರೈತರ ಪಂಪ್ ಸೆಟ್ಟುಗಳಿಗೆ ಹಗಲು ವೇಳೆ ಏಳು ತ್ರೀ ಫೇಸ್ ವಿದ್ಯುತ್ ಒದಗಿಸುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ಕುಡಚಿ, ನಂದಿಕುರಳಿ, ಸುಟ್ಟಟ್ಟಿ, ಚಿಂಚಲಿಯಲ್ಲಿ ಕೆಲ ಪ್ರಭಾವಿಗಳು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು. ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.