ಬೆಳಗಾವಿ ಜಿಲ್ಲೆಯಲ್ಲಿ ದಿಗ್ಗಜ, ಮೇರು ಸಾಹಿತಿಗಳು, ಸಾಧಕರಿದ್ದಾರೆ. ರಂಗಕರ್ಮಿ ಹಾಗೂ ವಿಶ್ರಾಂತ ಪ್ರಾಚಾರ್ಯ ಬಿ. ಎಸ್. ಗವಿಮಠ, ವಿಶ್ರಾಂತ ಪ್ರಾಚಾರ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ಜಾನಪದ ಸಾಹಿತಿ ಡಾ.ಬಸವರಾಜ ಜಗಜಂಪಿ, 60 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಲ್.ಎಸ್. ಶಾಸ್ತ್ರಿ, ಖ್ಯಾತ ಭಾಷಣಕಾರ, ಸಾಹಿತಿ ಡಾ.ವಿ. ಎಸ್. ಮಾಳಿ ಸೇರಿದಂತೆ ಅತಿರಥರಿಗೆ ಈ ಸಲವೂ ರಾಜ್ಯೋತ್ಸವ ಪ್ರಶಸ್ತಿ ಲಭಿಸದೆ ಇರುವುದು ಸೋಜಿಗ.
ಬೆಳಗಾವಿ :
ಬೆಳಗಾವಿ ಜಿಲ್ಲೆಗೆ ಈ ಬಾರಿ ಸಿಕ್ಕಿರುವ ರಾಜ್ಯೋತ್ಸವ ಪ್ರಶಸ್ತಿ ತೀವ್ರ ಗೊಂದಲ ಸೃಷ್ಟಿಸಿದೆ.
ಬೆಳಗಾವಿ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆ. ಸದ್ಯ ಬೆಳಗಾವಿ ಜಿಲ್ಲೆ ಎಂದು ಕರೆಯಲ್ಪಡುವ ಈ ವಿಸ್ತಾರವಾದ ಜಿಲ್ಲೆ ಭವಿಷ್ಯದಲ್ಲಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಅಥಣಿ ಜಿಲ್ಲೆಗಳಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಕಾಲಕಾಲಕ್ಕೆ ಈ ಪ್ರದೇಶಗಳಲ್ಲಿ ಹೊಸ ಜಿಲ್ಲೆಗಾಗಿ ಹೋರಾಟ ನಡೆಯುತ್ತಿವೆ. ಆದರೆ, ಈ ಬಾರಿಯೂ ಇಷ್ಟು ದೊಡ್ಡ ಜಿಲ್ಲೆಗೆ ಕೇವಲ 5 ಪ್ರಶಸ್ತಿ ನೀಡಿ ಮತ್ತೆ ಸರಕಾರ ಜಾಣ ಕಿವುಡುತನ ಮೆರೆದಿದೆ.
ಪ್ರತಿ ಬಾರಿ ಗಡಿ ಜಿಲ್ಲೆ ಬೆಳಗಾವಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅನ್ಯಾಯವಾಗುತ್ತದೆ. ಇದೇನು ಹೊಸದಲ್ಲ. ಆದರೆ ಈ ಬಾರಿ ಐವರಿಗೆ ಪ್ರಶಸ್ತಿ ನೀಡಿದೆ.
ಡಾ.ರಾಮಕೃಷ್ಣ ಮರಾಠೆ ಅವರನ್ನು ಹೊರತುಪಡಿಸಿ ಬೇರೆಯವರು ಅಷ್ಟೊಂದು ಪರಿಚಿತರಲ್ಲ.
ಕಿಚಡಿಯಾಯ್ತು ಹೆಸರಿನ ಕಿರಿಕಿರಿ
ಚಚಡಿ ಬುಚಡಿ !
ಶಂಕರ ಚಚಡಿ ಎಂಬ ಹೆಸರಿನವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಜಿಲ್ಲೆಯಲ್ಲಿ ಚಚಡಿ ಎಂಬ ಮೇಧಾವಿ ಸಾಹಿತಿಗಳು ಯಾರೂ ಇಲ್ಲ ಎನ್ನುವುದು ಸಾಹಿತಿಗಳ ಅಭಿಪ್ರಾಯ. ಆದರೆ, ಶಂಕರ ಚಚಡಿ ಎಂಬ ಬರಹಗಾರರು ಪತ್ರಿಕೆಗಳಿಗೆ ಬರೆಯುತ್ತಿದ್ದರು ಎನ್ನುತ್ತಾರೆ ಕೆಲವರು.
ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಬುಡಾ)
ಮಾಜಿ ಅಧ್ಯಕ್ಷ ಶಂಕರ ಬುಚಡಿ ಅವರಿಗೆ ಪ್ರಶಸ್ತಿ ಲಭಿಸಿದೆಯೋ ಅಥವಾ ಬರಹಗಾರ
ಶಂಕರ ಚಚಡಿಯವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆಯೋ ಎಂಬ ಅಚ್ಚರಿ ಜಿಲ್ಲೆಯ ಸಾಹಿತ್ಯ ವಲಯದಿಂದ ವ್ಯಕ್ತವಾಗಿದೆ. ಅದರಲ್ಲೂ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರಿಗೆ ಈ ಎಲ್ಲಾ ಸಾಹಿತಿಗಳ ಪರಿಚಯವಿಲ್ಲ!
ಈ ಬಾರಿ ಸಾಹಿತ್ಯ ವಲಯದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ತೆರೆಮರೆಯಲ್ಲಿ ಸಾಹಿತ್ಯಕೃಷಿ ಮಾಡಿಕೊಂಡಿರಬಹುದು. ಆದರೆ ಜಿಲ್ಲೆಯಲ್ಲಿ ಘಟಾನುಘಟಿ ಸಾಹಿತಿಗಳಿದ್ದಾರೆ . ಸಾಹಿತ್ಯ ಕೃಷಿಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿದವರಿದ್ದಾರೆ. ಅವರ ದಶಕಗಳ ಸೇವೆಯನ್ನು ಸರಕಾರ ಗಮನಿಸಿ ಪ್ರಶಸ್ತಿ ನೀಡಬೇಕಿತ್ತು ಎನ್ನುವುದು ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ.
ರಂಗಕರ್ಮಿ ಹಾಗೂ ವಿಶ್ರಾಂತ ಉಪನ್ಯಾಸಕ ಡಾ. ರಾಮಕೃಷ್ಣ ಮರಾಠೆ ಅವರಿಗೆ ಸಹ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಸಾಹಿತ್ಯ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತೆರೆಮರೆಯಲ್ಲಿದ್ದು ಪ್ರಚಾರ ಬಯಸದೆ ಸಾಹಿತ್ಯ ಸೇವೆ ಮಾಡುತ್ತಿರುವ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಕಾಲಿಕ. ಆದರೆ ಅವರನ್ನು ಕಲಬುರ್ಗಿ ಕೋಟಾದಡಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಕಲಬುರ್ಗಿ ಜಿಲ್ಲೆಯ ಕೋಟಾದಡಿ ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಜನಿಸಿದ ಡಾ. ರಾಮಕೃಷ್ಣ ಮರಾಠೆ ಅವರನ್ನು ಸೇರಿಸಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಬೆಳಗಾವಿ ಗಡಿ ಜಿಲ್ಲೆ ಮಾತ್ರವಲ್ಲ. ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗಡಿ ಜಿಲ್ಲೆಗೆ ಅಗ್ರ ಪ್ರಾಶಸ್ತ್ಯ ನೀಡಬೇಕು. ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಸತತವಾಗಿ ಆಗುತ್ತಿರುವ ಅನ್ಯಾಯವನ್ನು ಪರಿಗಣಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿ ಈ ಭಾಗಕ್ಕೆ ನೀಡುವ ಮೂಲಕ ಅನ್ಯಾಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಜಿಲ್ಲೆಯ ಸಾಹಿತಿಗಳ ಒಕ್ಕೊರಲ ಆಗ್ರಹವಾಗಿದೆ.