ಬೆಳಗಾವಿ :
ಎಸ್ಸೆಸ್ಸೆಲ್ಸಿಯಿಂದ ಹಿಡಿದು ಪಿಎಚ್ ಡಿ ವರೆಗೂ ಸಂಶೋಧನೆಗಳು ಮಾಡುತ್ತಾರೆ. ಆದರೆ ನಿಜಗುಣ ದೇವರು ನಾಲ್ಕನೇ ತರಗತಿಯವರಗೆ ಅಭ್ಯಾಸ ಮಾಡಿದ್ದರೂ ಇಷ್ಟೊಂದು ಪುಸ್ತಕ ಬರೆದಿರುವುದು ಹೆಮ್ಮೆಯ ಸಂಗತಿ ಎಂದು ಧಾರವಾಡ ವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು.
ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಶನಿವಾರ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಸಿದ್ದಲಿಂಗ ಕೈವಲಾಶ್ರಮ ಪಿ.ಜಿ.ಹುಣಶ್ಯಾಳ ಶ್ರೀ ನಿಜಗುಣ ದೇವರು ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಯಾವೊಬ್ಬ ಸಾಹಿತಿ ಇಷ್ಟೊಂದು ಬರಹವನ್ನು ಬರೆಯುತ್ತಾರೆಯೋ ಅವರ ಜ್ಞಾನದ ಬಗ್ಗೆ ಕೇಂದ್ರಬಿಂದುವಾಗಿ ಇಟ್ಟುಕೊಂಡು ಬರೆಯುತ್ತಾರೆ. ಪುಸ್ತಕ ಬರೆದವರು ಹಾಗೂ ಓದುಗರು ಯಾವ ರೀತಿ ನೋಡುತ್ತಾರೆ ಎನ್ನುವುದು ಮುಖ್ಯ. ಈ ವಿಚಾರದಲ್ಲಿ ನಿಜಗುಣ ದೇವರು ಪುಣ್ಯವಂತರು. ಅವರು ಧರ್ಮ ಪ್ರಚಾರ, ಸಾಮಾಜಿಕ ಸೇವೆಯ ಜೊತೆಗೆ ಸಾಹಿತ್ಯದ ಕಡೆ ಒಲವು ಹೊಂದಿದ್ದು ಸಾಹಿತ್ಯಕ್ಕೆ ಹಿಡಿದ ಕನ್ನಡಿ ಎಂದರು.
ಒಬ್ಬ ಮಠಾಧೀಶರು ಇಷ್ಟೊಂದು ಸಾಧನೆ ಮಾಡುತ್ತಿರುವುದು ಬೆಳಗಾವಿ ಜನರ ಅಭಿಮಾನ ಸಂಗತಿ. ನಿಜಗುಣ ದೇವರ ವಿಚಾರ ಸಂಕಿರಣಗಳಲ್ಲಿ ಅವರೊಬ್ಬ ಸ್ವಾಮೀಜಿ ಎಂದು ಕಾಣಬೇಡಿ. ಅವರು ಬರೆದಿರುವ ಪುಸ್ತಕದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕು ಎಂದರು.
ನಿಜಗುಣ ದೇವರ ಬಗ್ಗೆ ವಿಚಾರ ಸಂಕಿರಣ ಆಯೋಜಿಸಿ ಹುಕ್ಕೇರಿ ಹಿರೇಮಠದ ಸ್ವಾಮೀಜಿ ಅವರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲ ಸಾಹಿತಿಗಳನ್ನು ಒಗ್ಗೂಡಿಸಿ ನಿಜಗುಣ ದೇವರ ವಿಚಾರ ಹಾಗೂ ಸಮಾಜದ ಬಗ್ಗೆ ಅವರ ಕಳಕಳಿಯ ಬಗ್ಗೆ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಶೋಧನೆ ಮಾಡುವವರು ಕೇವಲ ಪದವಿ ಮಾಡಿದವರು ಗ್ರಂಥ ಬರೆಯಬಹುದು. ಆದರೆ ಪಿ.ಜಿ.ಹುಣಶ್ಯಾಳ ನಿಜಗುಣ ದೇವರು ಅಧ್ಯಯನ ಮಾಡಿರುವುದು ನಾಲ್ಕನೇ ತರಗತಿ. ಸಿದ್ಧಲಿಂಗ ಸೇವೆಯಿಂದ ಸಲುವಾಗಿ ಸಿದ್ದಲಿಂಗ ಕೈವಲಾಶ್ರಮದ ಕನಸಿನ ಕೂಸು ಬದುಕು ಬರಹದ ಕುರಿತು ಅಧ್ಯಯನ ಮಾಡುವುದು ಹೆಮ್ಮೆಯ ಸಂಗತಿ. ಇವರು ನೂರಾರು ಗ್ರಂಥ ಬರೆದಿದ್ದಾರೆ. ಸಾವಿರಾರು ಕವನ ಬರೆದಿದ್ದಾರೆ. ನಿಜಗುಣ ದೇವರಿಗೆ ಹಾಗೂ ಹುಕ್ಕೇರಿ ಹಿರೇಮಠಕ್ಕೆ ಅವಿನಾಭಾವ ಸಂಬಂಧ ಇದೆ. ಅಷ್ಟೆ ಅಲ್ಲದೆ, ನಾಗನೂರು ರುದ್ರಾಕ್ಷಿಮಠ ಹಾಗೂ ಕಾರಂಜಿಮಠದೊಂದಿಗೆಯೂ ಅವಿನಾಭಾವ ಸಂಬಂಧ ಇದೆ ಎಂದರು.
ನಿಜಗುಣ ದೇವರ ಬಗ್ಗೆ ವಿಚಾರ ಸಂಕಿರಣ ಮಾಡಬೇಕೆಂದು ಬಹಳ ದಿನದಿಂದ ವಿಚಾರ ಇತ್ತು. ನಿಜಗುಣ ದೇವರು ವಿಚಾರಗಳನ್ನು ಶಾಲಾ, ಕಾಲೇಜುಗಳಲ್ಲಿಯೂ ಉಪನ್ಯಾಸ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಬೇಕು. ಇದನ್ನು ಎಲ್ಲಾ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸುವ ಕ್ರಮ ಕೈಗೊಳ್ಳುವ ಕಾರ್ಯ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ನಿಜಗುಣ ದೇವರು ಕೇವಲ ವಿರಕ್ತ, ಗುರು ಪರಂಪರೆ ಮಾತ್ರವಲ್ಲದೆ ಎಲ್ಲ ಪರಂಪರೆಯ ಗುರುಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಇಟ್ಟಕೊಂಡಿದ್ದಾರೆ. ನಿಜಗುಣ ದೇವರು ಮಾನವೀಯ ಮೌಲ್ಯಗಳನ್ನು ಹೊಂದಿರುವ ಅಪರೂಪದ ವ್ಯಕ್ತಿ. ಜನಸಾಮಾನ್ಯರ ಜೊತೆಗೆ ಬೆರೆತು ಪದ್ಯಗಳನ್ನು, ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಅವುಗಳನ್ನು ಸಮಾಜದ ಜನರು ಓದಬೇಕು ಎಂದರು.
ನಿಜಗುಣ ದೇವರು ರಚಿಸಿದ ಕೃತಿಗಳು ಸಮಾಜಕ್ಕೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಿಚಾರ ಸಂಕಿರಣ ಆಯೋಜಿಸಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ಸಾಹಿತಿ ಡಾ.ರಾಮಕೃಷ್ಣ ಮರಾಠೆ ಮಾತನಾಡಿ, ನಿಜಗುಣ ದೇವರು ಆಧ್ಯಾತ್ಮ, ಗುರುಪರಂಪರೆಯ ಬಗ್ಗೆ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚು ಚರ್ಚೆಯಾಗಬೇಕಿದೆ. ನಿಜಗುಣ ದೇವರು ಕವಿಗಳು, ಸಾಹಿತಿಗಳು, ಗುರುಪರಂಪರೆ, ವೇದಾಂತ ಪರಂಪರೆಯ ಮಠದಲ್ಲಿ ಗುರುತಿಸಿಕೊಂಡು ಸಾಕಷ್ಟು ಸಾಹಿತಿಕ, ಧಾರ್ಮಿಕ, ಪರಂಪರೆ, ಧರ್ಮ, ಗುರುವಿನ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲ ಸಾಹಿತಿಗಳು ಇಂಥ ಗುರುಗಳಿಗೆ ಅತೀ ಹೆಚ್ಚು ವೇದಿಕೆ ಕಲ್ಪಿಸಿ ಸಮಾಜಕ್ಕೆ ಇನ್ನಷ್ಟು ಪುಸ್ತಕಗಳನ್ನು ರಚಿಸಲು ಸಹಕಾರ ನೀಡುವ ಅಗತ್ಯ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ನಿಜಗುಣ ದೇವರು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಕುರಿತು ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿರುವ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಇಲ್ಲಿ ನಡೆಯುವ ಚಿಂತನೆಯನ್ನು ಗ್ರಂಥದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ನಿಜಗುಣ ದೇವರೊಂದಿಗೆ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದಾರೆ. ದೇಹ ಎರಡಾದರೂ ಅವರ ಮನಸ್ಸು ಒಂದೆ ಎಂದರು.
ನಿಜಗುಣ ದೇವರ ಗುರು ಪರಂಪರೆಯ ವಿಷಯವಾಗಿ ಮಾತನಾಡಿದ ನಿಲಜಿಯ ಅಲೌಕಿ ಆಶ್ರಮದ ಸದ್ಗುರು ಶಿವಾನಂದ ಗುರುಜಿ, ನಿಜಗುಣ ದೇವರ ಬದುಕು ವಿಷಯವಾಗಿ ಬೀದರ್ ಗುರುದೇವಾಶ್ರಮದ ಶ್ರೀ ಗಣಪತಿ ಮಹಾರಾಜರು, ನಿಜಗುಣರ ಸಮಾಜಸೇವೆಯ ವಿಷಯವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪಕುಮಾರ ಕುರಂದವಾಡೆ, ನಿಜಗುಣ ದೇವರ ಕೈವಲ್ಯ ಕನ್ನಡಿ ಕೃತಿ ವಿಷಯವಾಗಿ ಸಾಹಿತಿ ಡಾ. ಜಿ.ಜಿ. ಕೆಂಪಣ್ಣವರ, ನಿಜಗುಣರ ಕೈವಲ್ಯ ಕೃತಿಯ ವಿಷಯದ ಬಗ್ಗೆ ಶಿರಿಷ್ ಜೋಶಿ, ನಿಜಗುಣ ದೇವರ ಭಾರತಕ್ಕೊಬ್ಬನೇ ಭಾರತೀಶ ಕೃತಿ ವಿಷಯವಾಗಿ ಡಾ. ಗುರುದೇವಿ ಹುಲ್ಲೆಪ್ಪನವರಮಠ, ನಿಜಗುಣ ದೇವರ ಶ್ರೀ ಸಿದ್ಧಲಿಂಗ ಯತಿರಾಜರ ಕೃತಿಯ ವಿಷಯವಾಗಿ ಸಾಹಿತಿ ಪ್ರಕಾಶ ಗಿರಿಮಲ್ಲನವರ ಉಪನ್ಯಾಸ ನೀಡಿದರು.
ಜಿ.ಟಿ.ಮಹಾದೇವಿ ಪ್ರಾರ್ಥಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು.