ಈ ಸಮಾಜದಲ್ಲಿ ಸಾವಿರಾರು ಜನರು ಹುಟ್ಟುತ್ತಾರೆ;ಸಾಯುತ್ತಾರೆ. ಜನನ ಮತ್ತು ಮರಣದ ನಡುವೆ ಕೆಲವರು ಮಾತ್ರ ಇತಿಹಾಸದಲ್ಲಿ ಅಮರರಾಗುತ್ತಾರೆ. ದೇಹ ನಶಿಸಿದರೂ ಅವರ ಉದಾತ್ತ ಕೈಂಕರ್ಯಗಳಿಂದ ,ಚಿಂತನೆಗಳಿಂದ ಅಜರಾಮರವಾದವರು. ಸೂರ್ಯ ಚಂದ್ರರಂತೆ ಸದಾಕಾಲ ಪ್ರಕಾಶಮಾನವಾದವರು. ವೀರಶೈವ ಪುಣ್ಯಪುರುಷರಲ್ಲಿ ಒಬ್ಬರಾದ ವಂಟಮೂರಿ ಸಂಸ್ಥಾನದ ನಿರ್ಮಾಪಕ;ಮಹಾದಾನಿ, ಕೊಡುಗೈ ದಾನಿಗಳಾದ, ಪ್ರಾತ:ಸ್ಮರಣೀರಾದ ಸರದಾರ ರಾಜಾ ಲಖಮಗೌಡರು.
ವಂಟಮೂರಿ ಸಂಸ್ಥಾನವು ಬಸವಂತರಾಯ ಪ್ರಭುವಿನಿಂದ ರಾಜಾ ಲಖಮಗೌಡರ ವರೆಗೆ ಉನ್ನತ ಮಟ್ಟದ ಸ್ಥಿತಿಯಲ್ಲಿತ್ತು. ವೀರಶೈವ ಪುಣ್ಯಪುರುಷರ ಸಾಲಿನಲ್ಲಿ ಕಂಡುಬರುವ ಮಹಾದಾನಿಗಳಿವರು. ಈ ನಾಡು ಕಂಡ ಅಪ್ರತಿಮ ಅನರ್ಘ್ಯ ರತ್ನ .ಸಂಸ್ಥಾನದಲ್ಲಿದ್ದು ಉತ್ತೊರತ್ತರ ಸ್ಥಾನಮಾನ ಘನತೆ ಗೌರವ, ಕೀರ್ತಿಗಳನ್ನು ಪಡೆದುಕೊಂಡವರು ರಾಜಾ ಲಖಮಗೌಡರು.
ಸಮಾಜ ಸುಧಾರಕರಾದ ಡಾ ಬಿ ಆರ್ ಅಂಬೇಡ್ಕರ್ ಹೇಳುವಂತೆ “ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಾಣ ಮಾಡಲಾರರು “ಎಂಬ ಹೇಳಿಕೆಯಂತೆ ವಂಟಮೂರಿ ಸಂಸ್ಥಾನ ಹುಟ್ಟುಹಾಕಿ ನವಸಮಾಜವನ್ನು ನಿರ್ಮಾಣ ಮಾಡಿದರು .ಒಂದು ಕುಲ ಜಾತಿ,ಮತ ಪಂಥಕ್ಕೆ ಸೀಮಿತವಾಗದೆ ,ಒಂದು ನಿರ್ದಿಷ್ಟ ಜನಾಂಗಕ್ಕೆ, ಪ್ರದೇಶಕ್ಕೆ ಅಂಟಿಕೊಳ್ಳದೆ ಇಡೀ ಮನುಕುಲದ ಏಳ್ಗೆಗಾಗಿ ದಾನ ಧರ್ಮ ಸಹಾಯ ಮಾಡಿದರು .ನಾಡು ನುಡಿಗೆ, ಧರ್ಮ, ಸಂಸ್ಕೃತಿಗೆ ಗಡಿಭಾಗ ಮೀರಿ ಸಮಾಜದ ಬದಲಾವಣೆಗಾಗಿ ಹಗಲಿರುಳು ಚಿಂತನೆ ಮಾಡಿದ ಮಹಾನುಭಾವರು.
ಯೋಗಿ ಪುಂಗವ ಮಗಿ ಪ್ರಭುದೇವರ ದಿವ್ಯಾನುಗ್ರಹ ಮೂಲಕ ಪ್ರಭು ಬಸವಂತರಾಯನಿಂದ ವಂಟಮೂರಿ ಸಂಸ್ಥಾನದವು ಅಸ್ತಿತ್ವಕ್ಕೆ ಬಂದಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಮುನ್ನೂರು ಹಳ್ಳಿಗಳನ್ನು ಒಳಗೊಂಡ ಪ್ರತಿಷ್ಠಿತ ವೀರಶೈವ ಲಿಂಗಾಯತ ದೇಶಗತಿಯಾಗಿತ್ತು . ಪ್ರಭು ಬಸವಂತರಾಯನಿಂದ ಬಸವಪ್ರಭುವಿನ ವರೆಗೆ ಇಪ್ಪತ್ತು ಜನ ದೇಸಾಯಿಯರು ಸಂಸ್ಥಾನವನ್ನಾಳ್ಳಿದ್ದಾರೆ.
ಈ ಸಂಸ್ಥಾನವು ದಿಲ್ಲಿ ಬಾದಶಾಹನ ಆಡಳಿತಕ್ಕೆ ಒಳಪಟ್ಟ,ತದನಂತರ ಬಿಜಾಪುರ ಆದಿಲ್ ಶಾಹಿ ಸುಲ್ತಾರ ಅಧಿಕಾರಕ್ಕೆ ಸೇರಿತು. ಆಮೇಲೆ ಪೇಶ್ವೆಗಳು ಅಧಿಕಾರವನ್ನು ಹಿಡಿದರು. ಮುಂದೆ ಬ್ರಿಟಿಷರ ಆಳರಸರ ಆಡಳಿತಕ್ಕೆ ಆಣಿಯಾದರು. ದೇಶ ಸ್ವಾತಂತ್ರ್ಯವಾದ ನಂತರ ಪ್ರಜಾಪ್ರಭುತ್ವ ಒಕ್ಕೂಟದಲ್ಲಿ ಸೇರ್ಪಡೆಗೊಂಡಿತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ “ಅಮ್ಮಣಗಿ” ಗ್ರಾಮದ ವೀರಶೈವ ಲಿಂಗಾಯತ ಶರಣ ದಂಪತಿಗಳಾದ ಲಿಂ.ಶ್ರೀ ಅಲಗೌಡ ಹಾಗೂ ಲಿಂ.ಶ್ರೀಮತಿ ಕ್ರಷ್ಣಾಬಾಯಿ ದಂಪತಿಗಳಿಗೆ ಕ್ರಿ ಶ 1864,ಜುಲೈ 29 ರಂದು “ಅಪ್ಪಾಸಾಹೇಬ”ನ ಜನನವಾಯಿತು.
ಈ ಸಂಸ್ಥಾನದ 18 ನೆಯ ದೊರೆಯಾದ ಬಸವಪ್ರಭು ಲಿಂಗೈಕ್ಯರಾದ ನಂತರ ಸಂಸ್ಥಾನವು ನಿರ್ಗಗತಿಕವಾಗಿ ಬಡತನವಾಯಿತು. ತದನಂತರ ಸಂಸ್ಥಾನದ ಆಡಳಿತದ ಮೇಲ್ವಿಚಾರಣೆಯನ್ನು ಬ್ರಿಟಿಷ ಅರಸರ ಪ್ರತಿನಿಧಿಯಾದ ಅಂದಿನ ಬೆಳಗಾವಿ ಜಿಲ್ಲೆಯ ನ್ಯಾಯಾಧೀಶರಾದ ಮಿಸ್ಟರ್ ಶಾ ಅವರು ಆಡಳಿತವನ್ನು ನಿರ್ವಹಿಸುತ್ತಿದ್ದರು. ಸಂಸ್ಥಾನದ ನೆಂಟರು , ಹಿತೈಷಿಗಳು, ಆಪ್ತರು, ಬಂಧುಗಳು, ಅಭಿಮಾನಿಗಳು ,ಕೂಡಿಕೊಂಡು ಅಮ್ಮಣಗಿ ಗೌಡರ ಮನೆತನದ ಅಲಗೌಡರ ಮಗನನ್ನು ದತ್ತಕ ತಗೆದುಕೊಳ್ಳಲು ನಿರ್ಧಾರಿಸಿದರು. ಮಿಸ್ಟರ್ ಶಾ ಅನುಮತಿ ಮೇರೆಗೆ ಕ್ರಿ ಶ 1877 ರಂದು “ಅಪ್ಪಾಸಾಹೇಬ”ನನ್ನು “ಲಖಮಗೌಡ ” ವೆಂದು ನಾಮಕರಣ ಮಾಡಿ ವೀರಶೈವ ಲಿಂಗಾಯತ ಧರ್ಮದ ಪದ್ದತಿಯಂತೆ ದತ್ತಕ ಸ್ವೀಕರಿಸಲಾಯಿತು.
ಸಂಸ್ಥಾನದ ಆಡಳಿತವನ್ನು ಲಖಮಗೌಡರು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಜನಸಾಮಾನ್ಯ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಲು ಪ್ರಾರಂಭಿಸಿದರು. ಲಖಮಗೌಡರ ದ್ರಷ್ಟಿಕೋನವು ವಿಸ್ತಾರವಾಯಿತು .
ಅಪ್ಪಾಸಾಹೇಬ ಪ್ರಾಥಮಿಕ ಶಿಕ್ಷಣ ಮರಾಠಿ ಭಾಷೆಯಲ್ಲಿ ಅಮ್ಮಣಗಿ ಗ್ರಾಮದಲ್ಲಿ ಪ್ರಾರಂಭವಾಯಿತು .ಮುಂದಿನ ವಿದ್ಯಾಭ್ಯಾಸ ಕೊಲ್ಲಾಪುರ ಸರದಾರ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಕೊಲ್ಲಾಪುರದಲ್ಲಿ ಲಖಮಗೌಡರ ಜೊತೆಗೆ ಛತ್ರಪತಿ ಶಾಹು ಮಹಾರಾಜರು, ಸವನೂರಿನ ನವಾಬರು, ಮಿರಜದ ರಾಜಾಸಾಹೇಬರು, ಇಂಚಲಕರಂಜಿಯ ದೇಸಾಯಿರು, ಸಾವಂತವಾಡಿಯ ಸರದಾರರು,,ಮೈಶಾಳದ ಅಪ್ಪಾಸಾಹೇಬ ಶಿಂಧೆಯವರು, ಸಿರಸಂಗಿ ಸಂಸ್ಥಾನದ ಲಿಂಗರಾಜ ದೇಸಾಯಿರು ಲಖಮಗೌಡರ ಸಹಪಾಠಿಗಳಾಗಿದ್ದರು.
ನಯ ವಿನಯ, ಸರಳ ಸಜ್ಜನಿಕೆಯ, ಶಿಸ್ತು ಸಂಯಮ ಗುಣಗಳಿಂದ ಕೂಡಿದ್ದರು. ಹೆಡ್ ಮಾಸ್ಟರರಾದ ‘ಮಿಸ್ಟರ್ ಕ್ಯಾಂಡಿ ‘ ಯವರು ಲಖಮಗೌಡರಿಗೆ ವಿದ್ಯಾಭ್ಯಾಸ ಕ್ರಮದಲ್ಲಿ ಒಂದು ಹೊಸ ಮಾರ್ಗವನ್ನು ತೋರಿಸಿದರು. ಕೊಲ್ಲಾಪುರದಲ್ಲಿ ಶಿಕ್ಷಣ ಕಲಿಯುತ್ತಿರುವಾಗ ದತ್ತಕ ತಾಯಿಯಾದ ಶಿವಗಂಗಮ್ಮನವರು ಲಖಮಗೌಡರಿಗೆ ವಿವಾಹ ಮಾಡಲು ನಿಶ್ಚಯಿಸಿದರು. ಗೋಕಾಕ ಕಲ್ಯಾಣಶೆಟ್ಟಿ ಮನೆತನದ ಕನ್ಯೆಯಾದ ಪಾರ್ವತಿದೇವಿ ಯೊಡನೆ ಕ್ರಿ ಶ .1880 ರಲ್ಲಿ ಮದುವೆ ಮಾಡಿದರು. ಆಚಾರ ವಿಚಾರ ಪತ್ನಿಯಾದ ಪಾರ್ವತಿದೇವಿ ಯವರು ಪತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೇರಕಶಕ್ತಿಯಾಗಿದ್ದರು. ಕೊಲ್ಲಾಪುರದಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಲಖಮಗೌಡರು ಬೆಳಗಾವಿ ಸರದಾರ ಹೈಸ್ಕೂಲಿಗೆ ಬಂದು ಅಲ್ಲಿಯ ಹೆಡ್ ಮಾಸ್ಟರರಾದ ಮಿಸ್ಟರ್ ಹೂಗ್ ವರ್ಪರ್ ಅವರ ವಿಶೇಷ ಪ್ರೀತಿಗೆ ಪಾತ್ರರಾಗಿ ಕ್ರಿ ಶ 1883 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸಾದರು .
ಸಂಸ್ಥಾನದ ದೊರೆ ಲಖಮಗೌಡರು ತಮ್ಮ ಇಪ್ಪತ್ತನೆಯ ವರ್ಷದಲ್ಲಿ ಹುಟ್ಟುಹಬ್ಬದ ದಿನದಂದು ಬ್ರಿಟಿಷ ಸರ್ಕಾರದ ಪ್ರತಿನಿಧಿಯಾದ ಮಿಸ್ಟರ್ ಶಾ ರಿಂದ ವಂಟಮೂರಿ ಸಂಸ್ಥಾನದ ಆಡಳಿತವನ್ನು ವಹಿಸಿಕೊಂಡಿದ್ದರು . ಬ್ರಿಟಿಷ ಸರ್ಕಾರವು ಲಖಮಗೌಡರಿಗೆ ‘ ಪ್ರಥಮ ದರ್ಜೆಯ ಸರದಾರ ‘ವೆಂದು ಸ್ಥಾನಮಾನ ನೀಡಿತು. ವಂಟಮೂರಿಯಲ್ಲಿ ಇದ್ದುಕೊಂಡು ಎಲ್ಲ ಆಡಳಿತ ವ್ಯವಹಾರಗಳನ್ನು ಪರಿಚಯಿಸಿಕೊಂಡರು. ಸಂಸ್ಥಾನದ ಅಧಿಕಾರವನ್ನು ಪಡೆದುಕೊಳ್ಳುವಾಗ ಖಜಾನೆಯಲ್ಲಿ 35,000/-ಸಾವಿರ ರೂಪಾಯಿ ಇತ್ತು. ಕೇವಲ 30,000/- ಸಾವಿರ ರೂಪಾಯಿ ಬರುತ್ತಿತ್ತು. ಲಖಮಗೌಡರು ಸೂಕ್ಷ್ಮಮತಿಯಿಂದ ಗಮನಿಸಿ ಆಡಳಿತ ಪಾರದರ್ಶಕತೆಗೆ ಕ್ರಮ ಜರುಗಿಸಿದರು. ಆಡಳಿತ ಸುಧಾರಣೆಗಾಗಿ ಶ್ರೀ ಎಸ್ ಆರ್ ಪಾಟೀಲರನ್ನು ಕಾರಭಾರಿಯಾಗಿ, ಸಂಕೇಶ್ವರದ ಶ್ರೀ ಕೇಶವ ಕುಲಕರ್ಣಿ ಮತ್ತು ಹಣಬರಟ್ಟಿಯ ಕ್ರಷ್ಣರಾವ ಕುಲಕರ್ಣಿ ಯವರನ್ನು ಸಹಾಯಕ ಕಾರಭಾರಿಯನ್ನಾಗಿ ನೇಮಿಸಿಕೊಂಡರು. ಸೋರಿಹೋಗುತ್ತಿದ್ದ ಸಂಸ್ಥಾನದ ಆದಾಯವನ್ನು ತಡೆದರು. ಪ್ರಜೆಗಳ ಮೇಲೆ ಕಂದಾಯವನ್ನು ಹೆಚ್ಚಿಸದೆ, ಸಂಸ್ಥಾನದ ಆದಾಯವನ್ನು 75,000/- ಸಾವಿರ ರೂಪಾಯಿ ಹೆಚ್ಚಿಸಿದರು.
ಲಖಮಗೌಡರ ದಾಂಪತ್ಯ ಬದುಕು ಮಧುರವಾಯಿತ್ತು. ಅವರ ದಾಂಪತ್ಯದ ಜೀವನದ ಫಲಪ್ರದವಾಗಿ ಕ್ರಿ ಶ .1884 ರಲ್ಲಿ ಗಂಡು ಮಗು ಜನನವಾಯಿತು. ಆ ಮಗುವಿಗೆ ಅಜ್ಜನ ಹೆಸರಾದ ‘ಬಸವಪ್ರಭು’ ವೆಂದು ನಾಮಕರಣ ಮಾಡಿದರು.
ಲಖಮಗೌಡರು ಜ್ಞಾನದಾಹಿಗಳಾದ ಅನೇಕ ಮೌಲಿಕವಾದ ವೈದ್ಯಶಾಸ್ತ್ರ ಗ್ರಂಥಗಳನ್ನು ತಂದು ಆಳವಾದ ಅಧ್ಯಯನ ಮಾಡಿದರು. ತದನಂತರ ಕಾನೂನುಶಾಸ್ತ್ರ ಅಧ್ಯಯನ ಮಾಡಲು ದ್ರಡಸಂಕಲ್ಪ ಮಾಡಿ ಅನೇಕ ಕಾಯ್ದೆ ಕಾನೂನು ಪುಸ್ತಕಗಳ ತಂದು ಓದುತ್ತಿದ್ದರು. ಆಗಿನ ಬೆಳಗಾವಿ ಜಿಲ್ಲಾ ನ್ಯಾಯಾಧೀಶರಾದ ಮಿಸ್ಟರ್ ಶಾ ಮತ್ತು ಬೆಳಗಾವಿ ಪ್ರಖ್ಯಾತ ವಕೀಲರಾದ ‘ಅಪ್ಪಾಸಾಹೇಬ ಛತ್ರೆ ‘ ಇವರಿಂದ ಕಾಯ್ದೆ ಕಾನೂನಿನ ಜ್ಞಾನವನ್ನು ಪಡೆದುಕೊಂಡರು. ಶ್ರೀಯುತರು ಬ್ಯಾರಿಸ್ಟರ್ ಪದವಿ ಪಡೆಯಲು ಸಂಕಲ್ಪ ಮಾಡಿದರು. ಕ್ರಿ ಶ 1886 ರಲ್ಲಿ ಇಂಗ್ಲೆಂಡ್ ದೇಶದ ಕಾಯ್ದೆ ಕಾನೂನು ಸಂಸ್ಥೆಯಾದ “ಇನ್ನರ್ ಟೆಂಪಲ್” ಗೆ ಪಾದಾರ್ಪಣೆ ಮಾಡಿದರು.
ಕಾಯ್ದೆ ಜ್ಞಾನದ ದಿಗ್ಗಜರಾದ ಸಿಲ್ವೆಸ್ಟರ್ ಮತ್ತು ಲೀ ಅವರ ಮುಂದಾಳತ್ವದಲ್ಲಿ ಎರಡು ವರ್ಷ ಕಾನೂನು ವಿಷಯವನ್ನು ಅಧ್ಯಯನ ಮಾಡಿ ಕ್ರಿ ಶ 1880 ರಲ್ಲಿ “ಬಾರ್-ಆಟ-ಲಾ” ಪರೀಕ್ಷೆ ಪಾಸಾದರು. ವೀರಶೈವ ಲಿಂಗಾಯತ ಸಮಾಜದಲ್ಲಿ ಪ್ರಪ್ರಥಮವಾಗಿ ಬ್ಯಾರಿಸ್ಟರ್ ಪದವಿಗೆ ಭಾಜನರಾದ ಕೀರ್ತಿ ರಾಜಾ ಲಖಮಗೌಡರಿಗೆ ಸಲ್ಲುತ್ತದೆ. ಶ್ರೀಯುತರು ಕಾನೂನು ಅಧ್ಯಯನ ದೊಂದಿಗೆ ಇಂಗ್ಲಿಷ್ ಭಾಷೆ ,ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿಸ್ತಾರವಾಗಿ ಅಭ್ಯಸಿಸಿ ದರು. ಇಂಗ್ಲೆಂಡಿನ ಸಾಂಸ್ಕೃತಿಕ ಜೀವನದ ಉದಾತ್ತ ಮೌಲ್ಯಗಳಿಂದ ಪ್ರಭಾವಿತರಾದರು. ಪ್ರೆಂಚ್ ಮತ್ತು ಅಮೇರಿಕಾ ದೇಶಗಳ ಪ್ರವಾಸ ಮಾಡಿ ದ್ವಿಭಾಷೆಗಳ ಪಾಂಡಿತ್ಯ ಪಡೆದರು.
ಕ್ರಿ ಶ 1886 ರಲ್ಲಿ ಮರಳಿ ತಾಯ್ನಾಡಿಗೆ ಆಗಮಿಸಿದರು. ಆ ಸಂದರ್ಭದಲ್ಲಿ ಕನ್ನಡ ನಾಡಿನವರು ಮತ್ತು ಸಂಸ್ಥಾನದ ಪ್ರಜೆಗಳು ರಾಜಾ ಲಖಮಗೌಡರಿಗೆ ಅಭೂತಪೂರ್ವ ಸ್ವಾಗತ ಕೋರಿ, ಸನ್ಮಾನಿಸಿದರು. ಬೆಳಗಾವಿ ನಗರದಲ್ಲಿ ಇರದೇ ವಂಟಮೂರಿಯಲ್ಲಿದ್ದು ಪ್ರಜೆಗಳ ಯೋಗಕ್ಷೇಮ ನೋಡಿಕೊಂಡು ಪ್ರಜೆಗಳ ಪ್ರೀತಿ ಗೌರವಕ್ಕೆ ಪಾತ್ರರಾದರು. ಬ್ರಿಟಿಷ ಸರ್ಕಾರದವರು ಲಖಮಗೌಡರನ್ನು “ಪ್ರಥಮ ದರ್ಜೆ ನ್ಯಾಯಾಧೀಶರನ್ನಾಗಿ ನೇಮಿಸಿದರು. ತಮ್ಮ ಹಳೇವಾಡೆಯನ್ನು ನವೀಕರಿಸಿ ಆಡಳಿತ ಸಿಬ್ಬಂದಿಗೆ ಪ್ರತ್ಯೇಕ ಕಛೇರಿಗಳನ್ನು ಕಟ್ಟಸಿದರು. ವಾಡೆಯಲ್ಲಿ ಪ್ರತಿವರ್ಷ ಶ್ರಾವಣಮಾಸದಲ್ಲಿ ಪುರಾಣ ಪ್ರವಚನಗಳ ಮೂಲಕ ಧಾರ್ಮಿಕ ಆಚರಣೆಗಳಿಗೆ ಮಹತ್ವ ಕೊಡುತ್ತಿದ್ದರು. ಗಣೇಶ ಹಬ್ಬ ವನ್ನು ವಿಶೇಷ ಸಡಗರ ಸಂಭ್ರಮಗಳಿಂದ ಆಚರಿಸುತ್ತಿದ್ದರು. ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು ವಿಜಯ ದಶಮಿ ಯನ್ನು ವೈಭವದಿಂದ ನಡೆಸುತ್ತಿದ್ದರು. ವಾಡೆಯಲ್ಲಿ ಸಾಹಿತಿಗಳನ್ನ, ಕಲಾವಿದರನ್ನು ಪ್ರೋತ್ಸಾಹಿ,ಗೌರವಿಸುತ್ತಿದರು. ಹರಿ – ಹರ- ಹಜರತ ಉತ್ಸವಗಳಲ್ಲಿ ಭಾಗವಹಿಸುತ್ತಿದರು . ಅನೇಕತೆಯಲ್ಲಿ ಏಕತೆಯ ಮನೋಭಾವನೆ ಹೊಂದಿದವರು. ವ್ಯಷ್ಟಿ ಪ್ರಜ್ಞೆಕ್ಕಿಂತ ಸಮಷ್ಟಿ ಪ್ರಜ್ಞೆ ಉಳ್ಳವರು. ಪ್ರತಿ ವರ್ಷಕ್ಕೊಮ್ಮೆ ತಮ್ಮ ಮನೆತನದ ಆರಾಧ್ಯ ದೇವರಾದ ಮಗಿ ಪ್ರಭುದೇವ ಮಠಕ್ಕೆ ಹೋಗಿ ಪೂಜಾದಿ ಕೈಂಕರ್ಯಗಳಲ್ಲಿ ಭಾಗವಹಿಸಿ ದಿವ್ಯದರ್ಶನ ಪಡೆದುಕೊಳ್ಳುತ್ತಿದ್ದರು.
ಲಿಂ. ಗಿಲಗಂಚಿ ಗುರುಸಿದ್ದಪ್ಪನವರು ,ಅರಟಾಳ ರುದ್ರಗೌಡರು, ಎಸ್ ವಿ ಮೆಣಸಿನಕಾಯಿ, ಅವರೊಡನೆ ಕೊಡಿಕೊಂಡು ಕ್ರಿ ಶ 1883 ರಲ್ಲಿ “ಧಾರವಾಡಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ”ಯನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ರಾಜಾ ಲಖಮಗೌಡರು55,000/- ಸಾವಿರ ರೂಪಾಯಿಗಳನ್ನು ದಾನರೂಪದಲ್ಲಿ ನೀಡಿದರು. ವಂಟಮೂರಿ ಜನರ ಆರೋಗ್ಯಕ್ಕಾಗಿ ಆಯುರ್ವೇದ ಆಸ್ಪತ್ರೆ ಹುಟ್ಟು ಹಾಕಿದರು. ಕೆ ಎಲ್ ಇ ಸಂಸ್ಥೆಯ ಉಸ್ತುವಾರಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ನಿರ್ಮಿಸಿದರು. ವೀರಶೈವ ಹರ ಗುರು ವಿರಕ್ತ ವಟುಗಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಲು ಬಾದಾಮಿ ಸಮೀಪ “ಶಿವಯೋಗ ಮಂದಿರ ” ಸ್ಥಾಪನೆಗೆ ಕಾರಣೀಪುರುಷರಾದರು. ಬಾಗಲಕೋಟೆಯ ಕ್ರಿ ಶ 1908 ರಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ರಾಗಿದ್ದರು . ವೀರಶೈವ ಧರ್ಮದ ಮತ್ತು ವಚನಶಾಸ್ತ್ರವನ್ನು ಮೂಲಾಗ್ರವಾಗಿ ಅಧ್ಯಯನ ಮಾಡಿದರು. ಒಟ್ಟಾರೆಯಾಗಿ ರಾಜಾ ಲಖಮಗೌಡರು “ಸಾಂಸ್ಕೃತಿಕ ನಾಯಕ” ನಾಗಿ ವೀರಶೈವ ಲಿಂಗಾಯತ ಸಮಾಜದ ಶ್ರೇಯೋಭಿವೃದ್ಧಿಗೆ ಕಂಕಣಬದ್ದರಾದರು.
ಬ್ರಿಟಿಷ ಸರ್ಕಾರಕ್ಕೆ ನಿಷ್ಠೆ ಬದ್ದತೆ ಇರುವದರಿಂದ ರಾಜಾ ಲಖಮಗೌಡರನ್ನು ಬಾಂಬೆ ಸರ್ಕಾರದಲ್ಲಿ ಮೂರು ಬಾರಿ (ಎಂ ಎಲ್ ಸಿ)ಲೇಜಿಸ್ಲೇಟಿವ್ಹ ಕೌನ್ಸಿಲ್ ಗೆ ಸದಸ್ಯರಾಗಿ ಚುನಾಯಿತರಾದರು. ಬ್ರಿಟಿಷರಿಂದ ಸಿ ಆಯ್ ಇ ಹಾಗೂ ರಾಜಾ ಬಿರುದನ್ನು ಪಡೆದುಕೊಂಡ ವಿಭೂತಿಪುರುಷರು. ಸಾಮಾಜಿಕ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಅಭ್ಯುದಯಕ್ಕಾಗಿ ಇಡೀ ತಮ್ಮ ಸಂಪತ್ತನ್ನು ಮುಕ್ತ ಮನಸ್ಸಿನಿಂದ ಸಮಾಜಕ್ಕೆ ದೇಣಿಗೆ ನೀಡಿ ವಂಟಮೂರಿ ಸಂಸ್ಥಾನದ ನಿರ್ಮಾಪಕರಾದ ರಾಜಾ ಲಖಮಗೌಡರು.
ಆಚಾರ ವಿಚಾರ ಪತ್ನಿಯಾದ ಪಾರ್ವತಿದೇವಿಯವರು ಕ್ರಿ ಶ 1917 ರಲ್ಲಿ ಶಿವೈಕ್ಯರಾದರು. ತದನಂತರ ತಮ್ಮ ಇಡೀ ಜೀವನವೆಲ್ಲಾ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮೀಸಲಿಟ್ಟರು. ರಾಜಾ ಲಖಮಗೌಡರು ಮನುಕುಲದ ಏಳ್ಗೆಗಾಗಿ ದಾನ ನೀಡಿ ಮಹಾದಾನಿಗಳಾದರು;ಶಿಕ್ಷಣಪ್ರೇಮಿಗಳಾದರು;ಪ್ರಾತ:ಸ್ಮರಣೀರಾದರು.
ರಾಜಾ ಲಖಮಗೌಡರು ದಾನ ನೀಡಿದ ವಿವರ ಈ ಕೆಳಗಿನಂತೆ ನೋಡಬಹುದು.
1) ಧಾರವಾಡ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ- 55,000.
2).ಬೆಳಗಾವಿ ಕೆ ಎಲ್ ಇ ಸಂಸ್ಥೆಗೆ-20,000.
3).ಪುಣೆ ಡೆಕ್ಕನ್ ಶಿಕ್ಷಣ ಸಂಸ್ಥೆಗೆ-1000.
4). ಸಾಂಗಲಿ ವಿಲಿಂಗ್ಡನ್ ಕಾಲೇಜಿಗೆ-10,000.
5). ದೆಹಲಿ ಲೇಡಿ ಆಯುರ್ವಿನ್ ಕಾಲೇಜ-5,000.
6). ಬೆಳಗಾವಿ ಆಯುರ್ವೇದ ಕಾಲೇಜಿಗೆ 2,500.
7). ಬೆಳಗಾವಿ ಮರಾಠ ಮಂಡಳ ಕಾಲೇಜ-3,000.
8). ಬೆಳಗಾವಿ ವನಿತಾ ವಿದ್ಯಾಲಯ-1,000.
9). ಕೊಲ್ಲಾಪುರ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ-12,000.
10). ಬೆಳಗಾವಿ ಸಾರ್ವಜನಿಕ ಗ್ರಂಥಾಲಯ-10,000.
11). ಬೆಳಗಾವಿ ಕೆ ಎಲ್ ಇ ಸಂಸ್ಥೆಯ ವಿಜ್ಞಾನ ಮಹಾವಿದ್ಯಾಲಯ-5,000.
12). ಬೆಳಗಾವಿ ಟಿಳಕವಾಡಿ ಕಾನೂನು ಕಾಲೇಜಿಗೆ-1,00000.
13). ಪುಣೆ ಭಂಡಾರಕರ ಸಂಸ್ಕೃತ ಸಂಶೋಧನೆ ಸಂಸ್ಥೆ-50,000.
14). ಧಾರವಾಡ ಕರ್ನಾಟಕ ಕಾಲೇಜ (ಕೆಸಿಡಿ)-30,000.
15). ಮಿರಜ್ ಮಿಶನ್ ಆಸ್ಪತ್ರೆ-3000.
16). ಘಟಪ್ರಭಾ ಕರ್ನಾಟಕ ಆರೋಗ್ಯ ಧಾಮ-6,000.
17). ಬೆಳಗಾವಿ ಸಿವಿಲ್ ಆಸ್ಪತ್ರೆ-10,000.
18). ಬೆಳಗಾವಿ ಜಿಲ್ಲಾ ಕ್ಷಯರೋಗ ನಿವಾರಣಾ ಸಂಸ್ಥೆ-2,000.
19). ಧಾರವಾಡ ಲಿಂಗಾಯತ ಸಾಹಿತಿ ಸಮಿತಿ-2,500.
20). ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿಗೆ 1,00,000.
21). ಬೆಳಗಾವಿ ಸೋಶಿಯಲ್ ಕ್ಲಬ್,-6,000.
22). ಬೆಳಗಾವಿ ಯುನಿಯನ್ ಜಮಖಾನಾ -5,000.
23). ವಂಟಮೂರಿ ನೂಲು ಕಾರ್ಖಾನೆಗೆ-1,00,000.
24). ಪಂಢರಪುರ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನ ತಂಗುಮನೆಗೆ ಭೂದಾನ.
25) .ಚಿಕ್ಕೋಡಿ ಆರ್ ಡಿ ಸಂಯುಕ್ತ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ಭೂದಾನ.
26). ಹಿಡಕಲ್ ಜಲಾಶಯ ಆಣೆಕಟ್ಟು ಕಟ್ಟಡ ಕಟ್ಟಲಿಕ್ಕೆ ಧನಸಹಾಯ.
ರಾಜಾ ಲಖಮಗೌಡರು ಕೊಟ್ಟ ಅಲ್ಪ ದಾನಗಳು ಅಷ್ಟು ಮುಖ್ಯವಲ್ಲ. ಈ ಎಲ್ಲ ದಾನಗಳು ಪ್ರತಿಷ್ಠೆಗಾಗಿ ಕೊಟ್ಟುವುಗಳಲ್ಲ. ಸಮಾಜ ಏಳ್ಗೆಗಾಗಿ ,ಅಭಿವೃದ್ದಿಗಾಗಿ, ಮಾನವೀಯತೆಯಿಂದ ಕೊಟ್ಟ ಮಹಾದಾನಗಳಾಗಿವೆ.
ಗೌರವ -ಪ್ರಶಸ್ತಿಗಳು
ರಾಜಾ ಲಖಮಗೌಡರು “ಪ್ರಥಮ ದರ್ಜೆಯ ಸರದಾರ ” ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ” “ರಾಜಾ” ಪದವಿ ,’ಸಿ ಆಯ್ ಇ’ಪದವಿ ಹಾಗೂ ‘ಮೂರು ಲಕ್ಷ ಮುಂಡಿ ಪಾಚ್ಚಾ ‘ ಇನ್ನು ಹಲವಾರು ಗೌರವ ಪ್ರಶಸ್ತಿಗಳು ಇವರ ಕಿರೀಟಕ್ಕೆ ಕಳಸ ಪ್ರಿಯವಾದ. ನಾಲ್ಕನೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷತೆ ಮತ್ತು 19 ವರ್ಷಗಳ ವರೆಗೆ ಕೆ ಎಲ್ ಇ ಸಂಸ್ಥೆಯ ಅಧ್ಯಕ್ಷತೆ ಹಾಗೂ 9 ವರ್ಷ ಗಳ ವರೆಗೆ ಧಾರವಾಡ ವೀರಶೈವ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ನಾಡಿನ ಹೆಮ್ಮೆಯ ಸಂಗತಿಯಾಗಿದೆ.
ಬೆಳಗಾವಿ ಮತ್ತು ಧಾರವಾಡ ನಗರಗಳಲ್ಲಿ ರಾಜಾ ಲಖಮಗೌಡರ ಔದಾರ್ಯದ ಫಲಪ್ರದವಾಗಿ ಅನೇಕ ಶಿಕ್ಷಣ ಸಂಸ್ಥೆಗಳು,ಸಂಘ ಸಂಸ್ಥೆಗಳು ಹುಟ್ಟಿಕೊಂಡು ಅವರ ದಿವ್ಯವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತಿವೆ. ರಾಜಾ ಲಖಮಗೌಡರು ಎಂಟು ದಶಕಗಳ ಕಾಲ ಪರೋಪಕಾರ ಜೀವನ ಸಾಗಿಸಿ ಕ್ರಿ ಶ. 1943,ಜೂನ 2 ರಂದು ಲಿಂಗದಲ್ಲಿ ಲೀನವಾದರು.
ದಾನಿ ,ಮಹಾದಾನಿ; ಕೊಡುಗೈದಾನಿಗಳಾದ ರಾಜಾ ಲಖಮಗೌಡರ 160 ನೆಯ ಜಯಂತ್ಯುತ್ಸವವನ್ನು ಜುಲೈ29,2024 ರಂದು ಕೆ ಎಲ್ ಇ ಸಂಸ್ಥೆಯ, ಆರ್ ಎಲ್ ಎಸ್ ಮಹಾವಿದ್ಯಾಲಯದಲ್ಲಿ ಆಚರಿಸಲಾಗುವುದು. ತನ್ನಮಿತ್ಯ ಬರೆದ ಲೇಖನವಿದು.
ಲೇಖಕರು:
ಪ್ರೊ.ಶಶಿಕಾಂತ ಬಿ.ತಾರದಾಳೆ
ಕನ್ನಡ ಅಧ್ಯಾಪಕರು
ಆರ್ ಎಲ್ ಎಸ್ (ಸ್ವಾಯತ್ತ) ಮಹಾವಿದ್ಯಾಲಯ, ಬೆಳಗಾವಿ.
ಮೊಬೈಲ್ ನಂ:9945912292