ಬೆಂಗಳೂರು : ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ್ದು, ಜನಸಾಮಾನ್ಯರಿಗೆ ಶಾಕ್ ನೀಡಿದೆ.
ಕರ್ನಾಟಕ ಮಿಲ್ ಫೆಡರೇಶನ್ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿ ಈ ಬೆಲೆ ಏರಿಕೆ ಮಾಡಿದೆ. ಹೊಸ ದರಗಳು ನಾಳೆಯಿಂದ ಅಂದರೆ ಜೂನ್ 26 ರಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ಬೆಲೆ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭೀಮಾನಾಯ್ಕ್ ಅವರು, ಪ್ರಸ್ತುತ ಮಾರಾಟ ಮಾಡಲಾಗುತ್ತಿರುವ ಹಾಲಿನ ಜೊತೆ ಐವತ್ತು ಮಿಲಿ ಲೀಟರ್ ಹಾಲು ಹೆಚ್ಚುವರಿ ಸೇರಿಸಲಾಗುತ್ತದೆ. ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಸಿಗಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ 2 ರೂ ಹೆಚ್ಚಳ ಮಾಡುತ್ತಿದ್ದೇವೆ. 15% ಹಾಲು ಸಂಗ್ರಹ ಹೆಚ್ಚಳ ಆಗಿದೆ. ಇದನ್ನ ಮಾರಾಟ ಮಾಡುವ ದೃಷ್ಟಿಯಿಂದ ಪ್ರತಿ ಪ್ಯಾಕೇಟ್ ಗೆ 50 ಎಂಎಲ್ ಹೆಚ್ಚುವರಿ ಹಾಲನ್ನ ಪ್ಯಾಕೆಟ್ ನಲ್ಲಿ ನೀಡಲಿದ್ದೇವೆ. ಹಾಗಾಗಿ ಹೆಚ್ಚುವರಿ ಹಾಲು ನೀಡಿ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಇದು ದರ ಏರಿಕೆ ಅಲ್ಲಪರಿಷ್ಕೃತ ದರ ನಾಳೆಯಿಂದ (ಜೂ.26) ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಲೀಟರ್ ಹಾಲಿಗೆ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ನಾಳೆ(ಜೂನ್ 26)ಯಿಂದ ಈ ದರ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಿಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರೂಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಂದಿನಿಯ ವಿವಿಧ ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳು
ನೀಲಿ ಪ್ಯಾಕೆಟ್ ಹಾಲು (ಟೋನ್ಡ್ ಮಿಲ್ಕ್): 42 ರಿಂದ 44 ರೂ.
ನೀಲಿ ಪ್ಯಾಕೆಟ್ (ಹೋಮೊಜೆನೈಸ್ಡ್ ಟೋನ್ಡ್ ಹಾಲು): 43 ರಿಂದ 45 ರೂ.
ಕಿತ್ತಳೆ ಪ್ಯಾಕೆಟ್ ಹಾಲು (ಹೋಮೊಜೆನೈಸ್ಡ್ ಹಸುವಿನ ಹಾಲು): 46 ರಿಂದ 48 ರೂ.
ಕಿತ್ತಳೆ ವಿಶೇಷ ಹಾಲು: 48 ರಿಂದ 50 ರೂ.
ಶುಭಂ ಹಾಲು: 48 ರಿಂದ 50 ರೂ.
ಸಮೃದ್ಧಿ ಹಾಲು: 51 ರಿಂದ 53 ರೂ.
ಶುಭಂ (ಹೋಮೊಜೆನೈಸ್ಡ್ ಟೋನ್ಡ್ ಹಾಲು): 49 ರಿಂದ 51 ರೂ.
ಶುಭಂ ಗೋಲ್ಡ್ ಹಾಲು: 49 ರಿಂದ 51 ರೂ.
ಶುಭಂ ಡಬಲ್ ಟೋನ್ಡ್ ಹಾಲು: 41 ರಿಂದ 43