ನವದೆಹಲಿ : 2025 ರಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಚುನಾವಣಾ ಪ್ರಾಬಲ್ಯವನ್ನು ಮುಂದುವರೆಸಿತು, ದೆಹಲಿ ಮತ್ತು ಬಿಹಾರದಲ್ಲಿ ಗೆಲುವು ಸಾಧಿಸಿತು. ಬೃಹನ್ ಮುಂಬೈ ಮಹಾನಗರ ಪಾಲಿಕೆ ಮತ್ತು ಮಹಾರಾಷ್ಟ್ರದ ಇತರ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಭಾರೀ ಗೆಲುವಿನೊಂದಿಗೆ 2026 ಪ್ರಾರಂಭವಾಯಿತು.
ಇದೇ ವೇಳೆ ಇಂಡಿಯಾ ಟುಡೇ-ಸಿ ವೋಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಈಗ ಚುನಾವಣೆ ನಡೆದರೆ ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎ ತನ್ನ ಉತ್ತಮ ಪ್ರದರ್ಶನವನ್ನು ಮುಂದುವರೆಸಲಿದೆ ಎಂದು ಹೇಳಿದೆ. ಈಗ ಲೋಕಸಭಾ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್ಡಿಎ 352 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿದೆ. 2024ರ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ‘400 ಪಾರ್’ ಘೋಷಣೆಯಿಂದ ಇದು ದೂರವಿರಬಹುದು, ಆದರೆ ಬಿಜೆಪಿ ನೇತೃತ್ವದ ಎನ್ಡಿಎಯಲ್ಲಿ ಮತದಾರರ ನಂಬಿಕೆ ಅಚಲವಾಗಿದೆ ಹಾಗೂ ಅಖಂಡವಾಗಿದೆ ಎಂದು ಸಂಖ್ಯೆಗಳು ತೋರಿಸುತ್ತವೆ.
ಮತ್ತೊಂದೆಡೆ, 2024ರಲ್ಲಿ 234 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಈಗ ಲೋಕಸಭೆ ಚುನಾವಣೆ ನಡೆದರೆ 182 ಸ್ಥಾನಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಹೇಳಿದೆ. ಆಗಸ್ಟ್ 2025ರಲ್ಲಿ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಕಂಡುಬಂದಿದ್ದ 208 ಸ್ಥಾನಗಳಿಗಿಂತ ಇದು ಗಣನೀಯ ಕುಸಿತವನ್ನು ಸೂಚಿಸುತ್ತದೆ.
2026 ರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಈ ಸಂಖ್ಯೆಗಳು ಒಂದು ನಿರ್ಣಾಯಕ ಹೆಜ್ಜೆಯಾಗಿ ಬರಲಿವೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ – ಚುನಾವಣೆಗೆ ಬರಲಿವೆ. ಇವುಗಳಲ್ಲಿ, ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಈವರೆಗೆ ಅಧಿಕಾರಕ್ಕೆ ಬಂದಿಲ್ಲ. ಈಗ ಈ ರಾಜ್ಯಗಳಲ್ಲಿ ಚುನಾವಣೆಯನ್ನು ಇನ್ನೂ ಹೆಚ್ಚು ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ ಬಿಜೆಪಿ ತಯಾರಿ ನಡೆಸಿದೆ.
2024 ರ ಚುನಾವಣೆಯಲ್ಲಿ, ಬಿಜೆಪಿ ಸ್ವಂತ ಬಲದ ಮೇಲೆ ಸರಳ ಬಹುಮತವನ್ನು ಪಡೆಯಲು ವಿಫಲವಾದ ನಂತರ ಪ್ರತಿಪಕ್ಷಗಳ ಟೀಕೆಗೆ ಗುರಿಯಾಯಿತು. ಲೋಕಸಭೆಯಲ್ಲಿ ಅದರ ಸಂಖ್ಯೆಯು 240ಕ್ಕೆ ನಿಂತಿತು, ಇದು 272 ರ ಸರಳ ಬಹುಮತದ ಸಂಖ್ಯೆಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಬಿಜೆಪಿ ತನ್ನ ಮಿತ್ರಪಕ್ಷಗಳಾದ ನಿತೀಶಕುಮಾರ ಅವರ ಜೆಡಿ (ಯು) ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯನ್ನು ಅವಲಂಬಿಸಬೇಕಾಯಿತು. ಕಾಂಗ್ರೆಸ್ ತನ್ನ ಲೋಕಸಭಾ ಸ್ಥಾನಗಳನ್ನು 99 ಕ್ಕೆ ಒಯ್ದಿತ್ತು.
ಆದಾಗ್ಯೂ, ಅದರ ನಂತರ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಉತ್ತಮ ಸಾಧನೆ ತೋರಲು ಸಾಧ್ಯವಾಗಲಿಲ್ಲ. ಅದು ಎನ್ಡಿ ಎದುರು ಅನೇಕ ರಾಜ್ಯಗಳಲ್ಲಿ ಹೀನಾಯವಾಗಿ ಸೋಲನುಭವಿಸಿತು. ಎನ್ಡಿಎ ಚುನಾವಣಾ ಗೆಲುವಿನ ಯಾತ್ರೆ ಮುಂದುವರಿಯಿತು. ಹರಿಯಾಣ, ಮಹಾರಾಷ್ಟ್ರ, ದೆಹಲಿ ಮತ್ತು ಬಿಹಾರದಂತಹ ಪ್ರಮುಖ ರಾಜ್ಯಗಳಲ್ಲಿ ಎನ್ಡಿಎ ಭರ್ಜರಿ ಜಯ ಸಾಧಿಸಿತು. ಇಂಡಿಯಾ ಮೈತ್ರಿಕೂಟ ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತು.
ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಏನು ಹೇಳುತ್ತದೆ..?
ಪಕ್ಷವಾರು ನೋಡಿದರೆ, ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಜನವರಿ 2026 ರ ಸಮೀಕ್ಷೆಯು ಈಗ ಲೋಕಸಭಾ ಚುನಾವಣೆಗಳು ನಡೆದರೆ, ಬಿಜೆಪಿ 287 ಸ್ಥಾನಗಳನ್ನು ಗಳಿಸುತ್ತದೆ ಮತ್ತು ಸ್ವಂತವಾಗಿ ಸರ್ಕಾರ ರಚಿಸುತ್ತದೆ ಎಂದು ಭವಿಷ್ಯ ನುಡಿದಿದೆ. ಆಗಸ್ಟ್ 2025 ರ ಸಮೀಕ್ಷೆಯು ಬಿಜೆಪಿಗೆ 260 ಸ್ಥಾನಗಳನ್ನು ಗಳಿಸುತ್ತದೆ ಎಂದು ಭವಿಷ್ಯ ನುಡಿದಿತ್ತು.
ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸುವ ಖ್ಯಾತಿಯನ್ನು ಹೊಂದಿರುವ ಪ್ರಧಾನಿ ಮೋದಿ, 57% ಅನುಮೋದನೆ ರೇಟಿಂಗ್ ಅನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ತೋರಿಸಿದೆ. ಆದಾಗ್ಯೂ, ಆಗಸ್ಟ್ 2025 ರ ಸಮೀಕ್ಷೆಯಲ್ಲಿ ಅವರು ಪಡೆದ 58% ರೇಟಿಂಗ್ಗಿಂತ ಇದು ಸ್ವಲ್ಪ ಕಡಿಮೆಯಾಗಿದೆ.
ಸ್ಥಿರ ನಾಯಕತ್ವ ಮತ್ತು ‘ಬ್ರ್ಯಾಂಡ್ ಮೋದಿ’ ಮೇಲಿನ ನಂಬಿಕೆಯು ಎನ್ಡಿಎ (NDA)ಯನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ತೋರುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಮತ್ತು ಭಾರತವು ಟ್ರಂಪ್ ಅವರ ಬಲವಾದ ಸುಂಕ ಮತ್ತು ವ್ಯಾಪಾರ ತಂತ್ರಗಳಿಗೆ ಬಾಗದಿರುವುದು, ಯುಕೆ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ದೇಶೀಯವಾಗಿ ಮತ್ತು ಜಾಗತಿಕವಾಗಿ ಮೋದಿಯವರ ಇಮೇಜ್ ಅನ್ನು ಹೆಚ್ಚಿಸಿದೆ.
ಸಮೀಕ್ಷೆಯು ಈಗ ಚುನಾವಣೆ ನಡೆದರೆ ಕಾಂಗ್ರೆಸ್ 80 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಇದು ಆಗಸ್ಟ್ 2025 ರಲ್ಲಿ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ 97 ಸ್ಥಾನಗಳನ್ನು ಗೆಲ್ಲಬಹುದು ಸೂಚಿಸಿತ್ತು. ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಮಾಡಿದ “ಮತ ಕಳ್ಳತನ” ಆರೋಪವು ಸಾರ್ವಜನಿಕರ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಈ ಸಂಖ್ಯೆಗಳು ಸೂಚಿಸುತ್ತವೆ.
ಈಗ ಚುನಾವಣೆಗಳು ನಡೆದರೆ, ಎನ್ಡಿಎ (NDA) ತನ್ನ ಮತ ಪಾಲನ್ನು 47% ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ., ಆಗಸ್ಟ್ 2025 ರಲ್ಲಿ ಕಂಡುಬಂದ 46.7% ಕ್ಕಿಂತ ಇದು ಸ್ವಲ್ಪ ಹೆಚ್ಚಳ. 2024 ರ ಚುನಾವಣೆಯಲ್ಲಿ ಅದು 44% ಮತಗಳನ್ನು ಪಡೆದಿತ್ತು. ಇಂಡಿಯಾ ಮೈತ್ರಿಕೂಟವು ಆಗಸ್ಟ್ ಸಮೀಕ್ಷೆಯಲ್ಲಿ 40.9%ರಷ್ಟುಪಡೆಯಬಹುದು ಎಂಬ ಅಂದಾಜಿಗಿಂತ ಈಗಿನ ಸಮೀಕ್ಷೆಯು ಈಗ ಚುನಾವಣೆ ನಡೆದರೆ ಕಡಿಮೆ 39%ರಷ್ಟು ಮತಗಳನ್ನು ಪಡೆಯಬಹುದು ಎಂದು ಹೇಳಿದೆ.


