ಕನ್ನಡನಾಡಿನ ಮಾಧ್ಯಮ ದೊರೆ ಎಂದೇ ಪ್ರಸಿದ್ಧರಾಗಿರುವ ವಿಜಯ ಸಂಕೇಶ್ವರ ಅವರು ಕನ್ನಡ ಮಾಧ್ಯಮ ಲೋಕದಲ್ಲಿ ಸಂಚಲನ ಸೃಷ್ಟಿಸಿದವರು.1999ರಲ್ಲಿ ವಿಜಯ ಕರ್ನಾಟಕ ಆರಂಭಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಬಿರುಗಾಳಿಗೆ ಕಾರಣರಾಗಿರಾದವರು. ನೂತನ ಎಂಬ ವಾರಪತ್ರಿಕೆ ಹಾಗೂ ಭಾವನಾ ಎಂಬ ಮಾಸಪತ್ರಿಕೆಯನ್ನು ವಿಜಯ ಕರ್ನಾಟಕದ ಜತೆಗೆ ಕನ್ನಡಿಗರಿಗೆ ಪರಿಚಯಿಸಿದವರು. 2004ರಲ್ಲಿ ವಿಜಯ್ ಟೈಮ್ಸ್ ಎಂಬ ಆಂಗ್ಲಪತ್ರಿಕೆಯನ್ನು ಸಹ ಅವರು ಲೋಕಾರ್ಪಣೆಗೊಳಿಸಿದ್ದರು. 2006ರಲ್ಲಿ ಉಷಾ ಕಿರಣ ಎಂಬ ತಮ್ಮ ಇನ್ನೊಂದು ಕನ್ನಡ ಪತ್ರಿಕೆಯನ್ನು ಪರಿಚಯಿಸಿದ್ದರು. ಆದರೆ ಮುಂದೆ ವಿಜಯ ಕರ್ನಾಟಕ, ವಿಜಯ ಟೈಮ್ಸ್ ಮತ್ತು ಉಷಾ ಕಿರಣಗಳನ್ನು ಟೈಮ್ಸ್ ಗ್ರೂಪಿಗೆ ಮಾರಿದ್ದರು.2012 ರಲ್ಲಿ ಮತ್ತೆ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದ ಡಾ.ವಿಜಯ ಸಂಕೇಶ್ವರ ಅವರು ವಿಜಯವಾಣಿ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮ ಹಿಡಿತ ಸಾಧಿಸಿ ಅಗ್ರಸ್ಥಾನ ಪಡೆದವರು. 2017 ರಲ್ಲಿ ದಿಗ್ವಿಜಯ ವಾಹಿನಿ ಮೂಲಕ ಅವರು ದೃಶ್ಯ ಮಾಧ್ಯಮದಲ್ಲೂ ಹೊಸ ಅಲೆಯನ್ನು ಸೃಷ್ಟಿಸಿದವರು. ಇದೀಗ ದಿಗ್ವಿಜಯ ವಾಹಿನಿಯನ್ನು ಇನ್ನೊಬ್ಬ ಮಾಧ್ಯಮ ದೊರೆ ಅರ್ನಾಬ್ ಗೋಸ್ವಾಮಿ ಅವರಿಗೆ ಹಸ್ತಾಂತರಿಸುತ್ತಿದ್ದಾರೆ..
ಬೆಂಗಳೂರು : ಜನ ಜೀವಾಳ ಜಾಲ: ಕನ್ನಡ ನಾಡಿನ ಪ್ರಸಿದ್ಧ ಉದ್ಯಮಿ ವಿಆರ್ ಎಲ್ ಮೂಲಕ ಚಿರಪರಿಚಿತರಾಗಿರುವ ಡಾ.ವಿಜಯ್ ಸಂಕೇಶ್ವರ ನೇತೃತ್ವದ ಹೆಸರಾಂತ ‘ದಿಗ್ವಿಜಯ’ ಸುದ್ದಿವಾಹಿನಿ ಈಗ ಅರ್ನಾಬ್ ಗೋಸ್ವಾಮಿ ಪಾಲಾಗಿದೆ. ಇನ್ನು ಮುಂದೆ ಈ ವಾಹಿನಿ ‘ದಿಗ್ವಿಜಯ’ ಹೆಸರಿನಲ್ಲಿ ಕಾಣಿಸಿಕೊಳ್ಳದೆ ‘ರಿಪಬ್ಲಿಕ್ ಕನ್ನಡ’ ವಾಹಿನಿ ಹೆಸರಲ್ಲಿ ಕಾಣಿಸಿಕೊಳ್ಳಲಿದೆ.
ಡಾ.ವಿಜಯ ಸಂಕೇಶ್ವರ ಅವರು ಅತ್ಯಂತ ಮಹತ್ವಾಕಾಂಕ್ಷೆಯಿಂದ 2017ರಲ್ಲಿ ದಿಗ್ವಿಜಯ ಟಿವಿ ಚಾನಲ್ ಅನ್ನು ಆರಂಭಿಸಿದರು. ಇದು ಇಗ ಹಲವು ವೈಶಿಷ್ಟ್ಯಗಳ ಮೂಲಕ ಕನ್ನಡದ ಚಾನೆಲ್ಗಳ ಪೈಕಿ ಮುಂಚೂಣಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಮುಂದೆ ಇದು ರಾಷ್ಟ್ರಮಟ್ಟದಲ್ಲಿ ಸತತ ಐದು ವರ್ಷಗಳಿಂದ ಅಗ್ರಸ್ಥಾನದಲ್ಲಿರುವ ರಿಪಬ್ಲಿಕ್ ಚಾನೆಲ್ ನೊಂದಿಗೆ ವಿಲೀನಗೊಳ್ಳಲಿದ್ದು, ಕೆಲವು ತಿಂಗಳುಗಳ ಕಾಲ ‘ದಿಗ್ವಿಜಯ’ ಹೆಸರಿನಲ್ಲಿ ಸುದ್ದಿ ವಾಹಿನಿ ಪ್ರಸಾರವಾಗಲಿದ್ದು ಸದ್ಯಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಂತರ ರಿಪಬ್ಲಿಕ್ ಕನ್ನಡ ಹೆಸರಿನಲ್ಲಿ ಗುರುತಿಸಿಕೊಳ್ಳುವುದು ಬಹುತೇಕ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.
ಅರ್ನಾಬ್ ಗೋಸ್ವಾಮಿ ಎಂಬ ಇಂಡಿಯಾ ವಾಂಟ್ಸ್ ಟು ನೋ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡವರು. ಅವರ ಗಡಸು ಧ್ವನಿ ಕೇಳುವರಿಗೆ ಅತ್ಯಂತ ಚಿರಪರಿಚಿತವಾಗಿದೆ. 2017ರಲ್ಲಿ ರಿಪಬ್ಲಿಕ್ ಟಿವಿ ಆರಂಭಿಸಿ ಸಂಚಲನ ಮೂಡಿಸಿದ್ದಾರೆ. ಇದು ಆರಂಭಗೊಂಡ ಪ್ರಾರಂಭದ ವಾರದಿಂದಲೇ ಟಿಆರ್ಪಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಇಂಗ್ಲಿಷ್, ಹಿಂದಿ, ಬಂಗಾಳಿ ಭಾಷೆಗಳಲ್ಲಿ ರಿಪಬ್ಲಿಕ್ ವಾಹಿನಿ ಕಾರ್ಯ ನಿರ್ವಹಿಸುತ್ತಿದೆ.
ದಿಗ್ವಿಜಯ ವಾಹಿನಿಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ನಡೆದಿದೆ.