ಬೆಳಗಾವಿ ರಾಜ್ಯದ ವಿಭಾಗಿಯ ಕೇಂದ್ರ. ಆದರೆ, ಈ ಪ್ರತಿಷ್ಠಿತ ವಿಭಾಗೀಯ ಕೇಂದ್ರದಲ್ಲಿ ಸ್ಥಾಪನೆ ಆಗಬೇಕಾಗಿದ್ದ ಅನೇಕ ಪ್ರತಿಷ್ಠಿತ ಕಚೇರಿಗಳು ಹುಬ್ಬಳ್ಳಿ- ಧಾರವಾಡದ ಜನಪ್ರತಿನಿಧಿಗಳ ಪ್ರಭಾವದಿಂದ ಆ ನಗರಗಳ ಪಾಲಾಗಿದೆ. ಇದೀಗ ಆ ಜಿಲ್ಲೆಯ ಕಣ್ಣು ಈಗ ಬೆಳಗಾವಿ ಜಿಲ್ಲೆಯ ನೀರಿನ ಮೇಲೆ ಬಿದ್ದಿದೆ. ಅದರಲ್ಲೂ ಬೆಳಗಾವಿ ಮಹಾನಗರಕ್ಕೆ ಜೀವ ಸೆಲೆಯಾಗಿರುವ ಹಿಡಕಲ್ ಜಲಾಶಯದ ನೀರನ್ನು ಕಬಳಿಸುವ ಸಂಚು ನಡೆದಿರುವುದು ಜಿಲ್ಲೆಯ ಜನತೆಯ ಪಾಲಿಗೆ ಭವಿಷ್ಯದಲ್ಲಿ ಮಾರಕವಾಗಲಿರುವುದಂತೂ ಖಚಿತ ಎಂದು ರೈತರು ಹಾಗೂ ಸಾರ್ವಜನಿಕರು ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಜೀವಾಳ ಸರ್ಚ್ ಲೈಟ್, ಬೆಳಗಾವಿ :
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಪ್ರಸಿದ್ಧ ಹಿಡಕಲ್ ಜಲಾಶಯದಿಂದ ನೆರೆಯ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಇದೀಗ ಜಿಲ್ಲೆಯ ಜನತೆಗೆ ಬರಸಿಡಿಲು ಬಡಿದಂತಾಗಿದೆ.
ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಲು ಉದ್ದೇಶಿತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದೆ. ಆದರೆ ಇದರ ಮಾಹಿತಿ ಬಹಿರಂಗ ಮಾಡಿಲ್ಲ. ಇದರ ವಿರುದ್ಧ ಇದೀಗ ಹೋರಾಟಗಾರರು ಮತ್ತು ರೈತರು ಸಿಡಿದೆದ್ದಿದ್ದಾರೆ. ಧಾರವಾಡದ ಕೆಐಎಡಿಬಿ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರತಿದಿನ 45 ಎಂಎಲ್ಡಿ ನೀರು ಪೂರೈಕೆ ಮಾಡಲು 313 ಕೋಟಿ ಕಾಮಗಾರಿಯನ್ನು ಎಡಿಯು ಇನ್ರಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 80 ಕಿಲೋಮೀಟರ್ ವರೆಗೂ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿತ್ತೂರು, ಬೈಲಹೊಂಗಲ, ಗೋಕಾಕ ತಾಲೂಕುಗಳ ರೈತರ ಜಮೀನುಗಳಲ್ಲಿ ಪೈಪ್ ಲೈನ್ ಮಾಡಲಾಗಿದೆ. ರೈತರಿಗೆ ಪರಿಹಾರವನ್ನೂ ಘೋಷಣೆ ಮಾಡಲಾಗಿದೆ. ಆದರೆ ಇಷ್ಟೆಲ್ಲ ನಡೆದರೂ ಬೆಳಗಾವಿ ಕೆಐಎಡಿಬಿ ಅಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು, ಸವದತ್ತಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಿದ ನವಿಲು ತೀರ್ಥ ಜಲಾಶಯದಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ 2.5 ಟಿಎಂಸಿ ನೀರು ಪೂರೈಕೆ ಮಾಡುವ ಪ್ರಸ್ತಾವ ಮೊದಲಿನಿಂದಲೂ ಇದೆ. ಈಗ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ಜನ ಬೇಸಿಗೆಯಲ್ಲಿ ಪರದಾಡುವ ಸ್ಥಿತಿ ಇದೆ.
ಇಂತಹ ಸ್ಥಿತಿ ಇರುವಾಗ ಹುಬ್ಬಳ್ಳಿ-ಧಾರವಾಡಕ್ಕೆ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವುದು ಸರಿಯಲ್ಲ ಎಂದು ಅವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಅವರು ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ ಮತ್ತು ಮೇಯರ್ ಸವಿತಾ ಕಾಂಬಳೆ ಅವರಿಗೆ ಮನವಿ ಸಲ್ಲಿಸಿ ಸಲ್ಲಿಸಿದ್ದಾರೆ. ರೈತರ ಗಮನಕ್ಕೆ ತರದೆ ಕಾಮಗಾರಿ ಮಾಡಲಾಗುತ್ತಿದ್ದು ತಕ್ಷಣ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಒಟ್ಟಾರೆ ಇದೀಗ ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.