ಕನ್ನಡ ಧ್ವಜ ಹಾರಾಟ ಕ್ರಮ ಕೈಗೊಳ್ಳದ ಸರಕಾರ ; ಅಧಿಕೃತ ಆದೇಶಕ್ಕೆ ನವೆಂಬರ್ ಗಡುವು
ಬೆಳಗಾವಿ : ಕನ್ನಡ ನಾಡ ಧ್ವಜಕ್ಕೆ ಶಾಸನಬದ್ಧ ವಿನ್ಯಾಸ ರೂಪಿಸಿ, ರಾಜ್ಯದ ಎಲ್ಲ ಸರಕಾರಿ/ಅರೇ ಸರಕಾರಿ ಕಚೇರಿಗಳ ಕಟ್ಟಡಗಳ ಮೇಲೆ, ಪ್ರತಿನಿತ್ಯ ಕನ್ನಡ ನಾಡ ಧ್ವಜ ಹಾರಿಸಲು ನವೆಂಬರ್ ತಿಂಗಳ ಅಂತ್ಯದೊಳಗಾಗಿ ಅಧಿಕೃತ ಆದೇಶ ಹೊರಡಿಸದಿದ್ದರೆ ಕನ್ನಡ ಪರ ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಬರುವ ಚುನಾವಣೆಯಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿಗಳಿಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ದಿನಾಂಕ :2014 ರ ನವೆಂಬರ್ 24 ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸುಮಾರು ವರ್ಷಗಳ ಹೋರಾಟದ ನಂತರ ಕೊನೆಗೂ ಎಚ್ಚತ್ತುಕೊಂಡ ಸರಕಾರ ಈಗಿರುವ ಕನ್ನಡ ನಾಡ ಧ್ವಜಕ್ಕೆ ಹೊಸ ವಿನ್ಯಾಸವನ್ನು ಸಿದ್ಧ ಪಡಿಸಿ ಅದಕ್ಕೆ ಕಾನೂನಿನ ಸ್ವರೂಪ/ಮಾನ್ಯತೆ ನೀಡುವ ಸಲುವಾಗಿ ದಿನಾಂಕ:
ಜೂನ್ 6, 2017 ರಂದು 9 ಜನ ಅಧಿಕಾರಿ/ಅಧಿಕಾರೇತರ ಸದಸ್ಯರುಗಳ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಸಾಕಷ್ಟು ವಿಳಂಬದ ನಂತರ ಈ ಸಮಿತಿಯೂ ಸುಮಾರು ಸಲ ಸಭೆ ಸೇರಿ ನಾಡಿನ ಹಿರಿಯ ಸಾಹಿತ್ಯಿಗಳು, ಕನ್ನಡ ಪರ ಚಿಂತಕರು ಮತ್ತು ಪ್ರಮುಖ ಕನ್ನಡ ಪರ ಸಂಘಟನೆಗಳ
ಮುಖಂಡರೊಂದಿಗೆ ಸುದೀರ್ಘ ವಾಗಿ ಚರ್ಚಿಸಿ ಈಗಿರುವ ನಮ್ಮ ನಾಡ ಧ್ವಜಕ್ಕೆ ಅಂತಿಮ ವಿನ್ಯಾಸ ಸಿದ್ಧಪಡಿಸಿ ಈ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆದು ಸಾಕಷ್ಟು ಪರ ವಿರೋಧಗಳ ನಡುವೆ ಈ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ.
ಆದರೆ ಈ ಪ್ರಸ್ತಾವನೆಯು ಈಗ ಯಾವ ಹಂತದಲ್ಲಿರುವುದು ಎಂದು ಮಾಹಿತಿ ಹಕ್ಕಿನಿಂದ ಅರ್ಜಿಗಳನ್ನು ಸಲ್ಲಿಸಿದ್ದರೂ ಕೂಡಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ, ಅಲ್ಲದೇ ಈಗಿರುವ ಸರಕಾರ ಈ ಕುರಿತು ಮೌನ ವಹಿಸಿರುವುದು ಸಮಸ್ತ ಕನ್ನಡಿಗರ ಭಾವನೆಯನ್ನು ಕೆರಳಿಸಿದಂತಾಗಿದೆ. ಅಲ್ಲದೇ ಈ ಸರಕಾರವು ನಿಜವಾಗಿಯೂ ಕನ್ನಡ ಪರವಾಗಿರುವ ಸರಕಾರವೇ ಎಂಬ ಅನುಮಾನ ಬರುತ್ತಿರುವುದು ಎಂದು ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ದಿನಾಂಕ: ಜೂನ್ ಏಳರಂದು ಸರಕಾರಕ್ಕೆ ದಾಖಲೆಗಳ ಸಮೇತವಾಗಿ ಪತ್ರ ಬರೆದಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.
ಮಾತು-ಮಾತಿಗೂ ಕನ್ನಡ ಕನ್ನಡ ಎಂದು ಹೇಳುತ್ತಿರುವ ಸರಕಾರದಲ್ಲಿರುವ ಸಚಿವರು ಹಾಗೂ ಅಧಿಕಾರಿಗಳು ಈ ಕುರಿತು ಕೂಡಲೇ ಕ್ರಮ ಕೈಗೊಂಡು ನವೆಂಬರ್ ತಿಂಗಳ ಅಂತ್ಯದೊಳಗಾಗಿ ಎಲ್ಲ ಸರಕಾರಿ ಹಾಗೂ ಅರೇ ಸರಕಾರಿ ಕಛೇರಿಗಳ ಕಟ್ಟಡಗಳ ಮೇಲೆ ಕನ್ನಡ ನಾಡ ಧ್ವಜ ಹಾರಿಸಲು ಅಧಿಕೃತ ಆದೇಶ ಹೊರಡಿಸದಿದ್ದರೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಬರುವ ಚುನಾವಣೆಯಲ್ಲಿ ಸರಕಾರ ಇದರ ಪರಿಣಾಮ ಎದುರಿಸಬೇಕಾಗುವುದು ಎಂದು ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.