ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣಪತಿ ಮೂರ್ತಿ ತಯಾರಿಸದಂತೆ ಈಗಿನಿಂದಲೇ ನೋಟಿಸ್ ನೀಡಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದರು.
ಮಂಡಳಿಯ ಪ್ರಗತಿ ಪರಿಶೀಲನೆಯನ್ನು ಬುಧವಾರ ನಡೆಸಿದ ಸಚಿವರು, ಪಿಒಪಿ ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಮೊದಲೇ ತಿಳಿಸಿದ್ದರೆ, ಪಿಒಪಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರಲಿಲ್ಲ ಎಂದು ಈ ಮಾದರಿಯ ಗಣಪತಿ ತಯಾರಕರು ಪ್ರತಿ ವರ್ಷ ಹೇಳುತ್ತಾರೆ. ಹಾಗಾಗಿ, ತಯಾರಿಕೆ ಆರಂಭಿಸುವ ಮೊದಲೇ ನೋಟಿಸ್ ನೀಡುವ ಕೆಲಸ ಮಾಡಿ ಎಂದು ನಿರ್ದೇಶನ ನೀಡಿದರು.
ಹಸಿರು ಪಟಾಕಿ ಹೊರತಾಗಿ ಹೆಚ್ಚು ಮಾಲಿನ್ಯಕಾರಕ ಸಾಮಾನ್ಯ ಪಟಾಕಿ ಮಾರಾಟ, ದಾಸ್ತಾನು ಮಾಡದಂತೆ ಪಟಾಕಿ ಮಾರಾಟಗಾರರಿಗೆ ನೋಟಿಸ್ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಪಟಾಕಿ ಮಾರಾಟಗಾರರ ವಿಳಾಸ ಪಡೆದು, ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ಸೂಚಿಸಬೇಕು ಎಂದು ಖಂಡ್ರೆ ಆದೇಶಿಸಿದರು.