ಬೆಳಗಾವಿ :ಜನರಿಗೆ ಅತ್ಯಂತ ಪ್ರಿಯವಾಗಿರುವ ಮಾವಿನ ಹಣ್ಣುಗಳಿಗೆ ರಾಸಾಯನಿಕ ಲೇಪನ ಮಾಡಿರುವುದನ್ನು ಇದೀಗ FSSAI ಗಂಭೀರವಾಗಿ ಗಮನಿಸಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಇರುವ ಸಗಟು ಹಣ್ಣುಗಳ ಮಾರುಕಟ್ಟೆಗೆ ಅಧಿಕಾರಿ ಜಗದೀಶ್ ಜಿಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಹಾರದ ಗುಣಮಟ್ಟ ಖಾತ್ರಿ ಹೊಂದಿಲ್ಲದ ಕಾರಣಕ್ಕೆ 9 ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶೇಕಡಾ 95 ರಷ್ಟು ಅಂಗಡಿಗಳು ಆಹಾರದ ಗುಣಮಟ್ಟ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ನೀಡಿರುವ ಪರವಾನಿಗೆಗಳನ್ನು ಹೊಂದಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಮಾವಿನ ಹಣ್ಣುಗಳ ರಾಸಾಯನಿಕ ಲೇಪನದ ಬಗ್ಗೆ ದೂರು ಹಾಗೂ ಪುರಾವೆ FSSAI ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು. ಬೆಳಗಾವಿಯ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ರಾಸಾಯನಿಕ ಲೇಪನ ಮಾಡಲಾಗಿರುವ ಅಂಗಡಿಕಾರರಿಗೆ ನೋಟಿಸ್ ಜಾರಿ ಮಾಡಿರುವೆ. ಕೆಲ ಅಂಗಡಿಗಳು ಪರವಾನಿಗೆ ಹೊಂದಿಲ್ಲ. ವೈಯಕ್ತಿಕವಾಗಿಯೂ ಸ್ವಚ್ಛತೆ ಹೊಂದಿಲ್ಲ. ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವನ್ನು ತಡೆಹಿಡಿಯಲು ಪ್ರಯತ್ನಿಸುತ್ತೇನೆ. ಈ ಬಗ್ಗೆ ಅಂಗಡಿಕಾರರಿಗೆ ಸೂಚನೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
*ಬೆಳಗಾವಿ ಮಾರುಕಟ್ಟೆಯಲ್ಲಿ ರಾಸಾಯನಿಕದಿಂದ ಕೂಡಿದ ಮಾವಿನ ಹಣ್ಣುಗಳ ಅಬ್ಬರ: ಬೆಳಗಾವಿ ಮಹಾನಗರದ ಮಾರುಕಟ್ಟೆಯಲ್ಲೀಗ ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣುಗಳ ಮಾರಾಟ ತುಸು ಭರ್ಜರಿಯಾಗಿದೆ. ಮಾರುಕಟ್ಟೆಯಲ್ಲಿ ಹಳದಿ ಬಣ್ಣದ ಮಾವಿನ ಹಣ್ಣುಗಳ ನೋಟ ಕಣ್ಣಿಗೆ ಕುಕ್ಕುವಂತಿದೆ.
ಆದರೆ, ಮಾರುಕಟ್ಟೆಯಲ್ಲಿ ಕಂಡುಬರುವ ಈ ಮಾವಿನ ಹಣ್ಣು ಕೃತಕವಾಗಿ ಹಣ್ಣಾಗಿಲ್ಲ. ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಿದ ಹಣ್ಣು ತಿಂದವರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಯಾವ ಸಂದೇಹವು ಇಲ್ಲ. ಯಾಕೆಂದರೆ ಮರ ಗಿಡಗಳಲ್ಲಿ ಇರುವ ಮಾವು ಕಟಾವಿಗೆ ಬರುವುದು ಮೇ ತಿಂಗಳಲ್ಲಿ. ಆದರೆ ಅವಧಿಗೆ ಮುನ್ನವೇ ಮಾವನ್ನು ಕೊಯ್ಲು ಮಾಡಿ ಅದಕ್ಕೆ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಇದರಿಂದ ಮಾವುಪ್ರಿಯರ ಆಸೆ ಈಡೇರುತ್ತದೆ ನಿಜ. ಆದರೆ ಅನಾರೋಗ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ವಾಗುವ ಸಾಧ್ಯತೆ ಹೆಚ್ಚಿದೆ.
ಈಗ ಒಂದು ಡಜನ್ ಮಾವಿಗೆ 750-1800 ರೂಪಾಯಿಗಳವರೆಗೆ ಮಾರುಕಟ್ಟೆಯಲ್ಲಿ ಮಾವುಗಳ ಮಾರಾಟವಾಗುತ್ತಿದೆ. ರತ್ನಗಿರಿ ಆಪೂಸ್, ಪೈರಿ, ಗೋವಾ ಮಾಂಕೂರ್, ದೇವಗಡ ಆಪೂಸ್ ಸೇರಿದಂತೆ ನಾನಾ ತಳಿಯ ಮಾವುಗಳು ಇವೆ.
ರಾಸಾಯನಿಕ ಬಳಸಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.