ಹಾವೇರಿ : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರ ಚಾಲಕನೊಬ್ಬ ರಸ್ತೆಯ ಬದಿಯಲ್ಲಿ ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದು, ಆತ ಬಸ್ ನಿಲ್ಲಿಸಿ ನಮಾಜ್ ಮಾಡಿದ ವಿಡಿಯೋ ವೈರಲ್ ಆದ ನಂತರ ತನಿಖೆಗೆ ಆದೇಶಿಸಲಾಗಿದೆ.
ವೀಡಿಯೊದಲ್ಲಿ, ಬಸ್ ಚಾಲಕ ಆಸನದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು, ಬಸ್ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ ಸಂಚಾರ ದಟ್ಟಣೆಯಿಂದ ಕೂಡಿರುವುದನ್ನು ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಸಹಾಯಕರಾಗಿ ನೋಡುತ್ತಿರುವುದನ್ನು ಕಾಣಬಹುದು. ಬಸ್ ನಲ್ಲಿ ಪ್ರಯಾಣಿಕರು ಇದ್ದರೂ ಕರ್ತವ್ಯದ ಅವಧಿಯಲ್ಲಿಯೇ ಬಸ್ ಡ್ರೈವರ್ ಕಂ ಕಂಡಕ್ಟರ್ ಸೀಟಿನ ಮೇಲೆ ಕುಳಿತು ನಮಾಜ್ ಮಾಡಿದ್ದು, ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಚಾಲಕನ ನಡೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಮಂಗಳವಾರ ಸಂಜೆ ಹುಬ್ಬಳ್ಳಿ- ಹಾವೇರಿ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಕೆಲವು ಪ್ರಯಾಣಿಕರು ದೂರು ನೀಡಿದ್ದು, ಕರ್ನಾಟಕ ರಾಜ್ಯ ಸಾರಿಗೆ ನಿಗಮವು ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ಅವರು, “ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ” ಎಂದು ಬರೆದಿದ್ದಾರೆ.
“ಪ್ರತಿಯೊಬ್ಬರಿಗೂ ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದ್ದರೂ, ಕಚೇರಿ ಸಮಯದಲ್ಲಿ ಹೊರತುಪಡಿಸಿ ಬೇರೆ ಯಾವುದೇ ಸಮಯದಲ್ಲಿ ಅವರು ಹಾಗೆ ಮಾಡಬಹುದು. ಬಸ್ಸಿನಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡುವುದು ಆಕ್ಷೇಪಾರ್ಹ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ವೈರಲ್ ಆಗಿರುವ ವಿಡಿಯೋ ಬಗ್ಗೆ ತಕ್ಷಣ ತನಿಖೆ ನಡೆಸಲು ಮತ್ತು ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು” ಎಂದು ಸಚಿವರು ಸೂಚಿಸಿದ್ದಾರೆ.