ಬೆಳಗಾವಿ: ಬಳ್ಳಾರಿ ಜೈಲು ಸೇರಿರುವ ಚಲನ ಚಿತ್ರ ನಟ ಹಾಗೂ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಇದೀಗ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರ ವಲಯ ಡಿಐಜಿ ಟಿ.ಪಿ. ಶೇಷ ಅವರು ಜೈಲಿನ ಸೂಪರಿಟೆಂಡೆಂಟ್ ಗೆ ಜ್ಞಾಪನ ಪತ್ರ ಬರೆದಿದ್ದಾರೆ.
ದರ್ಶನ್ ಅವರನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಇರಿಸಬೇಕು, ಆ ಕೊಠಡಿಗೆ 24*7 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ಪ್ರತಿದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಶೇಖರಿಸಬೇಕು. ದರ್ಶನ್ ಇರುವ ಸೆಲ್ ನ ಕರ್ತವ್ಯಕ್ಕೆ ಪ್ರತ್ಯೇಕವಾಗಿ ಒಬ್ಬ ಮುಖ್ಯ ವೀಕ್ಷಕ ಅಧಿಕಾರಿ ನಿಯೋಜನೆ ಮಾಡಬೇಕು. ಪ್ರತಿ ದಿನ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲನೆ ಮಾಡಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಮತ್ತು ಬೀಗ ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮೊದಲು ಪ್ರತಿದಿನವೂ ದರ್ಶನ್ ಅವರ ಸೆಲ್ ತಪಾಸಣೆ ಮಾಡಬೇಕು. ಸೆಲ್ ಗೆ ನಿಯೋಜಿಸುವ ಸಿಬ್ಬಂದಿ ಬಾಡಿವೋರ್ನ್ ಕ್ಯಾಮರಾ ಧರಿಸಿರಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.