ವಾಷಿಂಗ್ಟನ್: ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಿದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಪ್ರಶಸ್ತಿ ಸಿಗದಕ್ಕೆ ಶ್ವೇತ ಭವನ ಖಾರವಾಗಿ ಪ್ರತಿಕ್ರಿಯಿಸಿದೆ.
ನೊಬೆಲ್ ಸಮಿತಿಯು ಶಾಂತಿಯ ಮೇಲೆ ರಾಜಕೀಯವನ್ನು ಇರಿಸುತ್ತದೆ ಎಂದು ಸಾಬೀತುಪಡಿಸಿದೆ” ಎಂದು ಶ್ವೇತಭವನದ ವಕ್ತಾರ ಸ್ಟೀವನ್ ಚೆಯುಂಗ್ ಶುಕ್ರವಾರ ಪ್ರಶಸ್ತಿ ಘೋಷಣೆಯ ನಂತರ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು, ಯುದ್ಧಗಳನ್ನು ಕೊನೆಗೊಳಿಸುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತಾರೆ. ಅವರು ಮಾನವೀಯ ಹೃದಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಸ್ವತಃ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ಗಂಟೆಗಳ ಮೊದಲು, ಓಸ್ಲೋದಲ್ಲಿ, ನೊಬೆಲ್ ಸಮಿತಿಯು ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಮರಿಯಾ ಕೊರಿನಾ ಮಚಾಡೊ ಅವರಿಗೆ ಘೋಷಿಸಲಾಗಿದೆ. ಅವರು ಸದ್ಯಕ್ಕೀಗ ವೆನೆಜುವೆಲಾ ಸಂಸತ್ತಿನಲ್ಲಿ ವಿಪಕ್ಷದ ನಾಯಕಿಯಾಗಿದ್ದಾರೆ. ಮಚಾದೊ 20 ವರ್ಷಗಳ ಹಿಂದೆ ತಮ್ಮ ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಧ್ವನಿ ಎತ್ತಿದ್ದರು. ಈಗಲೂ ಅದನ್ನು ಮುಂದುವರಿಸಿದ್ದಾರೆ.
ವಿವಿಧ ಸಂಸ್ಥೆಗಳಿಗೆ ಅವರು ಸಲ್ಲಿಸಿದ ಸೇವೆಯ ಮೂಲಕ ಮಾರಿಯಾ ನ್ಯಾಯಾಂಗ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಜನಪ್ರಿಯ ಪ್ರಾತಿನಿಧ್ಯಕ್ಕಾಗಿ ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಮಾರಿಯಾ ಅವರ ಪಾತ್ರ ಪ್ರಮುಖವಾದದ್ದು. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವ ಹೋರಾಟಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಸಹ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಕೆಲವು ತಿಂಗಳಿಂದ ಟ್ರಂಪ್ ತಮ್ಮನ್ನು ಜಾಗತಿಕ ಶಾಂತಿಪ್ರಿಯ ಎಂದು ಸಕ್ರಿಯವಾಗಿ ಪ್ರಚಾರ ಮಾಡಿಕೊಂಡಿದ್ದರು, ಅವರ 20 ಅಂಶಗಳ ಗಾಜಾ ಶಾಂತಿ ಒಪ್ಪಂದ ಯೋಜನೆಯನ್ನು ಎತ್ತಿ ತೋರಿಸಿದ್ದರು, ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಪದೇಪದೇ ಹೇಳಿಕೊಂಡಿದ್ದರು. 8 ತಿಂಗಳಲ್ಲಿ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಪದೇಪದೆ ಹೇಳಿಕೊಳ್ಳುತ್ತಿದ್ದ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಸಿಕ್ಕಿಲ್ಲ.