ನವದೆಹಲಿ: ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿ, ಕೇಂದ್ರವು ಮಂಗಳವಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಈ ಹೊಸ ವ್ಯವಸ್ಥೆಯೊಂದಿಗೆ, ಜನರು ಇನ್ನು ಮುಂದೆ ಹೋಟೆಲ್ಗಳು, ಅಂಗಡಿಗಳು, ವಿಮಾನ ನಿಲ್ದಾಣಗಳು ಅಥವಾ ಯಾವುದೇ ಇತರ ಪರಿಶೀಲನಾ ಕೇಂದ್ರಗಳಲ್ಲಿ ತಮ್ಮ ಆಧಾರ್ ಕಾರ್ಡ್ಗಳ ಮುದ್ರಿತ ಪ್ರತಿಗಳನ್ನು ಹಸ್ತಾಂತರಿಸಬೇಕಾಗಿಲ್ಲ. ಡಿಜಿಟಲ್ ವಿಧಾನದ ಮೂಲಕವೇ ವೆರಿಫೈ ಮಾಡಿಸಬಹುದು.
ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ವೆರಿಫೈ ಮಾಡಲು ಮತ್ತು ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಭೌತಿಕ ಕಾರ್ಡ್ಗಳನ್ನು ಕೊಂಡೊಯ್ಯುವ ಅಥವಾ ನಕಲು ಪ್ರತಿಗಳನ್ನು ಸಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ ಎಂದು ವರದಿ ತಿಳಿಸಿದೆ.
ಈ ಅಪ್ಲಿಕೇಶನ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಡಿಜಿಟಲ್ ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿರುವ ಸಚಿವರು, ಈ ಅಪ್ಲಿಕೇಶನ್ ಅನ್ನು ಆಧಾರ್ ಪರಿಶೀಲನೆಯನ್ನು ಸುಲಭ, ವೇಗ ಮತ್ತು ಹೆಚ್ಚು ಸುರಕ್ಷಿತವಾಗಿಸುವ ಕ್ರಮವೆಂದು ಬಣ್ಣಿಸಿದ್ದಾರೆ.
ಇದರ ಮೂಲಕ ಆಧಾರ್ ವೆರಿಫಿಕೇಶನ್, UPI ಪಾವತಿ ಮಾಡುವಷ್ಟು ಸರಳವಾಗುತ್ತದೆ ಎಂದು ವೈಷ್ಣವ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈಗ ಆ್ಯಪ್ ಪರೀಕ್ಷಾ ಆವೃತ್ತಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಬಳಕೆದಾರರಿಗೆ ಸುರಕ್ಷಿತ ಡಿಜಿಟಲ್ ವಿಧಾನಗಳ ಮೂಲಕ ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಲು ಮತ್ತು ಯಾವಾಗಲೂ ಅವರ ಒಪ್ಪಿಗೆ ಮೂಲಕವೇ ಡೇಟಾ ಹಂಚಿಕೊಳ್ಳಲು ಈ ಅಪ್ಲಿಕೇಶನ್ ಅಧಿಕಾರ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಈಗ ಕೇವಲ ಒಂದು ಟ್ಯಾಪ್ ಮೂಲಕ ಬಳಕೆದಾರರು ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಬಹುದು. ಇದು ಅವರಿಗೆ ವೈಯಕ್ತಿಕ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ..
ಇದರಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ ಫೇಸ್ ಐಡಿ ದೃಢೀಕರಣ. ಇದು ಸುರಕ್ಷತೆಯನ್ನು ಹೆಚ್ಚಿಸುವ ಜೊತೆಗೆ ವರಿಫೈ ಅನ್ನು ಸುಗಮಗೊಳಿಸುತ್ತದೆ.
ಎಕ್ಸ್ನಲ್ಲಿ ವಿಡಿಯೊ ಪೋಸ್ಟ್ ಮಾಡುವ ಮೂಲಕ ವೈಷ್ಣವ್ ಆ್ಯಪ್ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
ಆಧಾರ್ ಪರಿಶೀಲನೆಯು UPI ಪಾವತಿ ಮಾಡುವಷ್ಟು ಸರಳವಾಗುತ್ತದೆ. ಬಳಕೆದಾರರು ಈಗ ತಮ್ಮ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಧಾರ್ ವಿವರಗಳನ್ನು ಡಿಜಿಟಲ್ ಆಗಿ ವೆರಿಫೈ ಮಾಡಬಹುದು ಮತ್ತು ಹಂಚಿಕೊಳ್ಳಬಹುದು ಎಂದು ಸಚಿವರು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.