ಬೆಂಗಳೂರು: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ ನಿಂದ (ನ್ಯಾಕ್) ಕಾಲೇಜುಗಳಿಗೆ ಹಾಗೂ ವಿಶ್ವ ವಿದ್ಯಾಲಯಗಳಿಗೆ ನೀಡುತ್ತಿರುವ ಎ, ಬಿ, ಸಿ ಮಾದರಿಯ ಗ್ರೇಡ್ ವ್ಯವಸ್ಥೆಯನ್ನು ಮುಂದಿನ ತಿಂಗಳಿಂದ ರದುಗೊಳಿಸಲಾಗುತ್ತಿದೆ ಎಂದು ನ್ಯಾಕ್ ಸಂಸ್ಥೆಯ ನಿರ್ದೇಶಕ ಗಣೇಶನ್ ಕಣ್ಣಬೀರನ್ ಹೇಳಿದ್ದಾರೆ.
ನ್ಯಾಕ್ ಮಾನ್ಯತೆ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಸುಧಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಚರ್ಚಿಸಲು ಸೋಮವಾರ ನಗರದ ನ್ಯಾಕ್ ಕಚೇರಿಯಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸಂಸ್ಥೆಗಳಿಗೆ ಗ್ರೇಡ್ ಬದಲು ನ್ಯಾಕ್ ಮಾನ್ಯತೆ ಹೊಂದಿವೆಯೇ, ಇಲ್ಲವೇ ಎಂಬ ಮಾಹಿತಿ ನೀಡಲಾಗುತ್ತದೆ. ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಬದಲು ತಂತ್ರಜ್ಞಾನ ಬಳಸಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಿ, ಶುಲ್ಕವನ್ನು ಕಡಿತಗೊಳಿಸ ಲಾಗುತ್ತದೆ. ಕಾಲೇಜುಗಳ ಲೋಪ ದೋಷಗಳ ಕುರಿತು ಸಂಸ್ಥೆಗಳಿಗೆ ನೇರವಾಗಿ ಮಾಹಿತಿ ನೀಡಲಾಗುತ್ತದೆ. ಅವುಗಳನ್ನು ಸುಧಾರಿಸಿಕೊಳ್ಳಡ ಸಲಹೆ ಸೂಚನೆಗಳು, ಮಾರ್ಗದರ್ಶನ ಮಾಡಲು ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಮೂಲಸೌಕರ್ಯ, ಬೋಧನೆ, ಗುಣಮಟ್ಟ ಮುಂತಾದ ಮಾನದಂಡ ಆಧರಿಸಿ ಹಾಲಿ ವ್ಯವಸ್ಥೆಯಲ್ಲಿ ಗ್ರೇಡ್ ನೀಡಲಾಗುತ್ತಿದೆ. ಗ್ರೇಡ್ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಇದವು. ಈ ಹಿನ್ನೆಲೆಯಲ್ಲಿ ಸಮಗ್ರ ಬದಲಾವಣೆಗೆ ದೇಶಾದ್ಯಂತ ಕಾರ್ಯಾಗಾರ ನಡೆಸಲಾಗುತ್ತಿದ್ದು, ಸಲಹೆ ಸೂಚನೆಗಳನ್ನು ಆಧರಿಸಿ ಅಳವಡಿಸಿಕೊಳ್ಳಲಾಗುತ್ತದೆ ಎಂದರು.